ದೇಶ

ಗುಜರಾತ್ ಕಾಂಗ್ರೆಸ್ ಶಾಸಕನ ಮೇಲೆ ಬಿಜೆಪಿ ಕಾರ್ಯಕಾರಿಯಿಂದ ಹಲ್ಲೆ;  ಎಫ್‌ಐಆರ್ ದಾಖಲು

Ramyashree GN

ನವಸಾರಿ: ಜಿಲ್ಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಅವರ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕಾರಿ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭಾನುವಾರ ನಸುಕಿನಲ್ಲಿ ಖೇರ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವ ಸ್ಥಳೀಯ ಬಿಜೆಪಿ ಮುಖಂಡ ಬಾಬು ಅಹಿರ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಟೇಲ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಗುಜರಾತ್‌ನಲ್ಲಿ 'ಪರ್-ತಾಪಿ ನದಿ ಜೋಡಣೆ ಯೋಜನೆ' ವಿರುದ್ಧ ಬುಡಕಟ್ಟು ಜನಾಂಗಕ್ಕಾಗಿ ಹೋರಾಡಿದ ನಮ್ಮ ಶಾಸಕ ಅನಂತ್ ಪಟೇಲ್ ಅವರ ಮೇಲೆ ಬಿಜೆಪಿ ನಡೆಸಿದ ಹೇಡಿತನದ ದಾಳಿ ಖಂಡನೀಯ. ಇದು ಬಿಜೆಪಿ ಸರ್ಕಾರದ ಸಿಟ್ಟು. ಆದಿವಾಸಿಗಳ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೊನೆಯ ಉಸಿರು ಇರುವವರೆಗೂ ಹೋರಾಡುತ್ತಾರೆ' ಎಂದಿದ್ದಾರೆ.

ಆದರೆ, ಬಿಜೆಪಿಯು ಈ ದಾಳಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಇದು 'ಅನುಕಂಪ ಗಳಿಸುವ ಕೆಲಸ'ವಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.
ಈ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.

ಎಫ್‌ಐಆರ್‌ನ ಪ್ರಕಾರ, ನವಸಾರಿಯ ವಂಸ್ಡಾದ ಶಾಸಕ ಪಟೇಲ್ ಅವರು ಶನಿವಾರ ಸಂಜೆ ಸಭೆಗೆ ತೆರಳುತ್ತಿದ್ದಾಗ ಖೇರ್ಗಾಂನಲ್ಲಿ ಸುಮಾರು 50 ಜನರ ಗುಂಪು ದಾಳಿ ಮಾಡಿದೆ ಮತ್ತು ಅವರ ವಾಹನಕ್ಕೆ ಹಾನಿಯುಂಟುಮಾಡಿದೆ. ಎಫ್‌ಐಆರ್‌ನಲ್ಲಿ ಅಹಿರ್ ಜೊತೆಗೆ ಇತರ ಐವರು ಆರೋಪಿಗಳು ಮತ್ತು ದಾಳಿಯ ಹಿಂದೆ 40-45 ಜನರ ಗುಂಪನ್ನು ಹೆಸರಿಸಲಾಗಿದೆ.

ಗರ್ಬಾ ಕಾರ್ಯಕ್ರಮವೊಂದರಲ್ಲಿ ತನ್ನನ್ನು ಬೆಂಬಲಿಸಲು ಹಾಡಿದ ಹಾಡಿನ ಬಗ್ಗೆ ಆರೋಪಿ ಬಿಜೆಪಿ ನಾಯಕ ಅಸಮಾಧಾನಗೊಂಡಿದ್ದರಿಂದ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಟೇಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಟ್ರಾಫಿಕ್‌ನಿಂದಾಗಿ ವಾಹನ ನಿಲ್ಲಿಸಿದಾಗ ಆರೋಪಿಗಳು ತಮ್ಮ ವಾಹನದ ಬಳಿಗೆ ಬಂದು ಹೊರಗೆ ಬರುವಂತೆ ಹೇಳಿದರು. ಅವರು ನಿರಾಕರಿಸಿದಾಗ, ಅವರು ಬಾಗಿಲು ತೆರೆಯಲು ಕಾರಿನ ಗಾಜು ಒಡೆದರು. ಈ ವೇಳೆ ಆರೋಪಿಗಳು ಹಲವು ಬಾರಿ ಗುದ್ದಿದ್ದಾರೆ ಮತ್ತು ನಿಂದಿಸಿದ್ದಾರೆ. ಪಟೇಲ್ ಅವರ ಬಲಗಣ್ಣಿಗೆ ಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪೊಲೀಸರು ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

SCROLL FOR NEXT