ದೇಶ

ಶಾಸಕ, ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರ ನೀಡಿ: ಹೈಕೋರ್ಟ್ ಗಳಿಗೆ ಸುಪ್ರೀಂ ಆದೇಶ

Lingaraj Badiger

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧ ಐದು ವರ್ಷಗಳಿಂದ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳು ಮತ್ತು ಅವುಗಳ ತ್ವರಿತ ವಿಲೇವಾರಿಗೆ ಕೈಗೊಂಡ ಕ್ರಮಗಳ ವಿವರ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಸೂಚಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧ ಸಾಬೀತಾದ ನಂತರ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧ ಕೋರಿ 2016ರಲ್ಲಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, "ಎಲ್ಲಾ ಹೈಕೋರ್ಟ್‌ಗಳು ಸಂಸದ/ಶಾಸಕರ ವಿರುದ್ಧ ಐದು ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳ ಸಂಖ್ಯೆ ಮತ್ತು ಅವುಗಳ ತ್ವರಿತ ವಿಲೇವಾರಿಗೆ ಕೈಗೊಂಡ ಕ್ರಮಗಳನ್ನು ಸೂಚಿಸುವ ಅಫಿಡವಿಟ್ ಸಲ್ಲಿಸಬೇಕು. ನಾಲ್ಕು ವಾರಗಳಲ್ಲಿ ಈ ಅಫಿಡವಿಟ್‌ಗಳನ್ನು ಸಲ್ಲಿಸಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠ, ತನ್ನ ಆಗಸ್ಟ್ 10, 2021 ರ ಆದೇಶವನ್ನು ಮಾರ್ಪಡಿಸಿದ್ದು, ಶಾಸಕರ, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಬದಲಾಯಿಸಬಾರದು ಎಂದು ಹೇಳಿದೆ.

ವಿಶೇಷ ನ್ಯಾಯಾಲಯದ ಸೇವೆಯಿಂದ ಮುಕ್ತರಾಗಲು ಅನುಮತಿ ನೀಡುವಂತೆ ನ್ಯಾಯಾಂಗ ಅಧಿಕಾರಿಗಳು ಸಾಕಷ್ಟು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಬಡ್ತಿ ಅಥವಾ ವರ್ಗಾವಣೆ ಮಾಡಲಾಗಿದೆ ಎಂದು  ಅಮಿಕಸ್ ಕ್ಯೂರಿ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ.

2021ರ ಆಗಸ್ಟ್ 10 ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್, ಅಂತಹ ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಸ್ವಾತಂತ್ರ್ಯವಿದೆ ಎಂದು ಹೇಳಿದೆ.

SCROLL FOR NEXT