ದೇಶ

ಭಾರತೀಯ ಮಾಧ್ಯಮಗಳಲ್ಲಿ ಶೇ. 90 ರಷ್ಟು ನಾಯಕತ್ವದ ಸ್ಥಾನಗಳಲ್ಲಿ ಮೇಲ್ವರ್ಗದವರು- ವರದಿ

Nagaraja AB

ನವದೆಹಲಿ: ಭಾರತೀಯ ಮಾಧ್ಯಮಗಳಲ್ಲಿ ಶೇ. 90 ರಷ್ಟು ನಾಯಕತ್ವದ ಸ್ಥಾನಗಳು ಮೇಲ್ವರ್ಗದವರೇ ಆಕ್ರಮಿಸಿಕೊಂಡಿದ್ದು, ಭಾರತೀಯ ಪ್ರಮುಖ ಮಾಧ್ಯಮಗಳಲ್ಲಿ  ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿ ಮುಖ್ಯಸ್ಥರಿಲ್ಲ ಎಂದು ಹೊಸ ವರದಿಯೊಂದು ತಿಳಿಸಿದೆ.

ಟಿವಿ, ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಶೇ. 91 ರಷ್ಟು ನಾಯಕತ್ವದ ಸ್ಥಾನಗಳು ಸಾಮಾನ್ಯ ವರ್ಗದ ಜನರಿಂದ ಆಕ್ರಮಿತವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವೊಬ್ಬ ಮುಖ್ಯಸ್ಥರಿಲ್ಲ ಎಂಬುದಾಗಿ  ಆಕ್ಸ್‌ಫ್ಯಾಮ್ ಇಂಡಿಯಾ-ನ್ಯೂಸ್‌ಲಾಂಡ್ರಿ ಎರಡನೇ ಆವೃತ್ತಿಯ ವರದಿಯಲ್ಲಿ ಹೇಳಲಾಗಿದೆ.

ದಕ್ಷಿಣ ಏಷ್ಯಾದ ಅತಿದೊಡ್ಡ ನ್ಯೂಸ್ ಮೀಡಿಯಾ ಫೋರಂ  ದಿ ಮೀಡಿಯಾ ರಂಬಲ್ ನಲ್ಲಿ ಬಿಡುಗಡೆಯಾಗಿರುವ ವರದಿಯಂತೆ, ಹಿಂದಿ ಮತ್ತು ಇಂಗ್ಲೀಷ್ ಸುದ್ದಿ ಪತ್ರಿಕೆಗಳ 5 ಆರ್ಟಿಕಲ್ ಗಳಲ್ಲಿ ಮೂರನ್ನು ಸಾಮಾನ್ಯ ವರ್ಗಕ್ಕೆ ಸೇರಿದವರು ಬರೆದರೆ, ಎಸ್ ಸಿ, ಎಸ್ ಟಿ ಅಥವಾ ಓಬಿಸಿಗೆ ಸೇರಿದವರು ಕೇವಲ ಒಂದು ಆರ್ಟಿಕಲ್ ಬರೆದಿರುತ್ತಾರೆ. 

ನ್ಯೂಸ್ ಪೇಪರ್, ಟಿವಿ ಚಾನೆಲ್ ಗಳು, ಸುದ್ದಿ ವೆಬ್ ಸೈಟ್ ಗಳು ಮತ್ತು ಮ್ಯಾಗಜಿನ್ ಸೇರಿದಂತೆ ಒಟ್ಟಾರೇ 121 ಸುದ್ದಿಮನೆಯಲ್ಲಿ ನಾಯಕತ್ವ ಸ್ಥಾನಗಳಾದ ಮುಖ್ಯ ಸಂಪಾದಕ, ಮ್ಯಾನೇಜಿಂಗ್ ಎಡಿಟರ್, ಎಕ್ಸಿಕ್ಯೂಟಿವ್ ಎಡಿಟರ್, ಬ್ಯೂರೋ ಚೀಪ್, ಇನ್ ಫುಟ್, ಔಟ್ ಫುಟ್ ಎಡಿಟರ್ ಗಳಂತಹ ಪೋಸ್ಟ್ ಗಳಲ್ಲಿ 106 ಹುದ್ದೆಗಳನ್ನು ಸಾಮಾನ್ಯ ವರ್ಗದವರು ಆಕ್ರಮಿಸಿಕೊಂಡಿದ್ದರೆ,  ಐದು ಹುದ್ದೆಗಳನ್ನು ಓಬಿಸಿಯವರು ಮತ್ತು ಆರು ಹುದ್ದೆಗಳನ್ನು ಅಲ್ಪಸಂಖ್ಯಾತ ಸಮುದಾಯದವರು ಆಕ್ರಮಿಸಿಕೊಂಡಿದ್ದಾರೆ.

 ಪ್ರತಿ ನಾಲ್ವರು ಆ್ಯಂಕರ್ ಗಳಲ್ಲಿ (ಹಿಂದಿ ಚಾನೆಲ್ ಗಳ ಒಟ್ಟು 40 ಮತ್ತು ಇಂಗ್ಲೀಷ್ ಚಾನೆಲ್ ಗಳ 47) ಮೂವರು ಮೇಲ್ವರ್ಗಕ್ಕೆ ಸೇರಿರುತ್ತಾರೆ. ದಲಿತ, ಆದಿವಾಸಿ ಅಥವಾ ಓಬಿಸಿ ಗೆ ಸೇರಿದ ಒಬ್ಬರೇ ಒಬ್ಬರು ಆ್ಯಂಕರ್ ಕೂಡಾ ಇಲ್ಲ.

ಮೂರು ವರ್ಷಗಳಲ್ಲಿ ನಮ್ಮ ಎರಡನೇ ವರದಿ ಪ್ರಕಾರ ಭಾರತದಲ್ಲಿನ ನ್ಯೂಸ್‌ರೂಮ್‌ಗಳು ದೇಶದಲ್ಲಿನ ತಳ ಸಮುದಾಯಗಳು ಒಳಗೊಳ್ಳುವ ಸ್ಥಳವಲ್ಲ ಎಂದು ತೋರಿಸುತ್ತಿದೆ. ಎಲ್ಲಾ ಮಾಧ್ಯಮ ಸಂಘಟನೆಗಳ ಮುಖಂಡರು ಎಲ್ಲಾ  ಪ್ಲಾಟ್ ಫಾರ್ಮ್ ಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಬಹುಜನರಿಗೆ ಸೂಕ್ತ ವಾತಾವರಣ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ಸ್‌ಫ್ಯಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್ ಹೇಳಿದ್ದಾರೆ.

SCROLL FOR NEXT