ದೇಶ

24 ವರ್ಷಗಳ ನಂತರ ಗಾಂಧಿಯೇತರರು ಕಾಂಗ್ರೆಸ್ ಮುಖ್ಯಸ್ಥರಾಗಲು ಚುನಾವಣೆ: ಖರ್ಗೆ, ತರೂರ್ ನಡುವೆ ಹಣಾಹಣಿ

Nagaraja AB

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಹಣಾಹಣಿ ಏರ್ಪಟ್ಟಿದ್ದು, 24 ವರ್ಷಗಳ ನಂತರ ಪಕ್ಷ ಗಾಂಧಿಯೇತರ ಅಧ್ಯಕ್ಷರನ್ನು ಹೊಂದಲು ಸಜ್ಜಾಗಿದೆ.

9,000 ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು ರಹಸ್ಯ ಮತದಾನದಲ್ಲಿ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲಿದ್ದಾರೆ. ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ನಡೆಯುತ್ತಿರುವ ಚುನಾವಣಾ ಸ್ಪರ್ಧೆಯಲ್ಲಿ ಐಸಿಸಿ ಕೇಂದ್ರ ಕಚೇರಿ  ಮತ್ತು ದೇಶದಾದ್ಯಂತ 65 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದೆ.

ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸುವ ನಿರೀಕ್ಷೆಯಿದೆ. ರಾಹುಲ್ ಗಾಂಧಿ ಅವರು ಪಿಸಿಸಿ ಪ್ರತಿನಿಧಿಗಳಾದ ಸುಮಾರು 40 ಭಾರತ ಜೋಡೋ ಯಾತ್ರಿಗಳೊಂದಿಗೆ ಬಳ್ಳಾರಿಯ ಸಂಗನಕಲ್ಲು ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ಮತ ಚಲಾಯಿಸಲಿದ್ದಾರೆ.

ತರೂರ್ ತನ್ನನ್ನು ಬದಲಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ಹೇಳುತ್ತಿದ್ದರೂ  ಗಾಂಧಿಗಳ ಆಪ್ತ ಹಾಗೂ ಹಿರಿಯ ನಾಯಕರ ಬೆಂಬಲವಿರುವ ಖರ್ಗೆ ಗೆಲ್ಲುವ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ.ಅಕ್ಟೋಬರ್ 19ರಂದು ಮತಗಳ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.

SCROLL FOR NEXT