ದೇಶ

ಐಆರ್ ಸಿಟಿಸಿ ಹಗರಣ: ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸಲು ದೆಹಲಿ ಕೋರ್ಟ್ ನಕಾರ

Lingaraj Badiger

ನವದೆಹಲಿ: ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಮನವಿಯ ಮೇರೆಗೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸಲು ದೆಹಲಿ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಸಿಬಿಐ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್, ಹೆಚ್ಚು ಜಾಗರೂಕರಾಗಿರಿ ಮತ್ತು ಮಾತನಾಡುವ ವೇಳೆ ಸೂಕ್ತವಾದ ಪದಗಳನ್ನು ಬಳಸಿ ಎಂದು ತೇಜಸ್ವಿ ಯಾದವ್ ಅವರಿಗೆ ಸೂಚಿಸಿದೆ.

ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಯಾದವ್ ಅವರು ಕಾನೂನಿನ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದರು ಮತ್ತು ಸಂಪೂರ್ಣ ತನಿಖೆ ಮತ್ತು ಅದರ ನಂತರದ ವಿಚಾರಣೆಯನ್ನು ವಿಫಲಗೊಳಿಸಿದರು. "ಅವರಿಗೆ ನೀಡಲಾದ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ದುರುಪಯೋಗಪಡಿಸಿಕೊಂಡರು" ಎಂದು ಸಿಬಿಐ ದೂರಿತ್ತು.

ಯಾದವ್ ಅವರಿಗೆ ಈ ಹಿಂದೆ ನೀಡಲಾದ ಜಾಮೀನಿನಲ್ಲಿ ನಿಗದಿಪಡಿಸಿದ ಯಾವುದೇ ಷರತ್ತುಗಳನ್ನು ಅವರು ಉಲ್ಲಂಘಿಸಿಲ್ಲ ಎಂದು ಬಿಹಾರ ಡಿಸಿಎಂ ಪರ ವಕೀಲರ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

"ನಾನು(ಯಾದವ್) ವಿರೋಧ ಪಕ್ಷದಲ್ಲಿದ್ದೇನೆ ಮತ್ತು ತಪ್ಪಿನ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ನನ್ನ ಕರ್ತವ್ಯವಾಗಿದೆ. ಪ್ರಸ್ತುತ ಸರ್ಕಾರವು ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲಾ ವಿರೋಧ ಪಕ್ಷಗಳು ಇದನ್ನೇ ಅನುಭವಿಸುತ್ತಿವೆ" ಎಂದು ಯಾದವ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ನಂತರ ವಿವರವಾದ ಆದೇಶವನ್ನು ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಎರಡು ಹೊಟೇಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 2018ರ ಅಕ್ಟೋಬರ್‌ನಲ್ಲಿ ಜಾಮೀನು ನೀಡಿತ್ತು.

SCROLL FOR NEXT