ದೇಶ

ಎಎಪಿ ನಿರ್ಭರ್- ಆತ್ಮನಿರ್ಭರ್ ಯಾವುದು ಬೇಕು ಆಯ್ಕೆ ಮಾಡಿಕೊಳ್ಳಿ; ಕೇಂದ್ರ ಗೃಹ ಸಚಿವ ಅಮಿತ್ ಶಾ

Ramyashree GN

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ದೆಹಲಿಯನ್ನು 'ಎಎಪಿ ನಿರ್ಭರ್' ಆಗಿ ಮಾಡಲು ಬಯಸಿದೆ. ಆದರೆ, ಬಿಜೆಪಿ ರಾಷ್ಟ್ರ ರಾಜಧಾನಿಯನ್ನು ಆತ್ಮನಿರ್ಭರ್ ಆಗಬೇಕೆಂದು ಬಯಸಿದೆ. ಎಂಸಿಡಿ ಚುನಾವಣೆಯಲ್ಲಿ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಇಲ್ಲಿನ ತೆಹ್ಖಂಡ್‌ನಲ್ಲಿ ತ್ಯಾಜ್ಯದಿಂದ ಶಕ್ತಿ (ಡಬ್ಲ್ಯುಟಿಇ) ಸ್ಥಾವರವನ್ನು ಉದ್ಘಾಟಿಸಿದ ಶಾ, ಕೇಜ್ರಿವಾಲ್ ಸರ್ಕಾರವು ಹಿಂದಿನ ಮೂರು ನಾಗರಿಕ ಸಂಸ್ಥೆಗಳಿಗೆ ಮಲತಾಯಿ ಚಿಕಿತ್ಸೆ ನೀಡುತ್ತಿದೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ಗಳು 40,000 ಕೋಟಿ ರೂ. ಸಾಲದಲ್ಲಿ ಮುಳುಗುವಂತೆ ಮಾಡಿದೆ ಎಂದು ಆರೋಪಿಸಿದರು.

'ಅವರು (ಕೇಜ್ರಿವಾಲ್ ನೇತೃತ್ವದ ಪಕ್ಷ) ದೆಹಲಿಯು ಎಎಪಿ ನಿರ್ಭರ್ ಆಗಬೇಕೆಂದು ಬಯಸುತ್ತಾರೆ. ಆದರೆ, ಅದು ಆತ್ಮನಿರ್ಭರ್ ಆಗಬೇಕೆಂದು ನಾವು ಬಯಸುತ್ತೇವೆ. ಮುಂದಿನ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (ಎಂಸಿಡಿ) ಚುನಾವಣೆಯಲ್ಲಿ ಜನರು ಎಎಪಿ ನಿರ್ಭರ್ ಅಥವಾ ಆತ್ಮನಿರ್ಭರ್ ಆಗಬೇಕೆ ಎಂಬುದನ್ನು ನಿರ್ಧರಿಸಬೇಕು' ಎಂದು ದಕ್ಷಿಣ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾ ಹೇಳಿದರು.

ಎಎಪಿ ಸರ್ಕಾರವು ಪ್ರಚಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಜ್ರಿವಾಲ್ ಅವರು ಜಾಹೀರಾತುಗಳಿಂದ ಅಭಿವೃದ್ಧಿಯಾಗುತ್ತದೆ ಎನ್ನುವ ಅನಿಸಿಕೆಯನ್ನು ಹೊಂದಿದ್ದರು. ಆದರೆ 'ಈ ಭ್ರಮೆ ಕೇವಲ ಐದರಿಂದ ಏಳು ವರ್ಷಗಳವರೆಗೆ ಇರುತ್ತದೆ' ಎಂದು ಹೇಳಿದರು.

'ಜನರು 'ವಿಜ್ಞಾಪನ್ ಕಿ ರಾಜನೀತಿ' (ಜಾಹೀರಾತು ರಾಜಕೀಯ) ಮತ್ತು 'ವಿಕಾಸ್ ಕಿ ರಾಜನೀತಿ' (ಅಭಿವೃದ್ಧಿಯ ರಾಜಕೀಯ) ನಡುವೆ ಆಯ್ಕೆ ಮಾಡಬೇಕಾಗುತ್ತದೆ' ಎಂದು ಅವರು ಹೇಳಿದರು.

SCROLL FOR NEXT