ದೇಶ

ಮಹಾರಾಷ್ಟ್ರದಲ್ಲಿ ಸಿಬಿಐಗೆ ಮುಕ್ತ ಸಮ್ಮತಿ ಮರುಸ್ಥಾಪಿಸಿದ ಏಕನಾಥ್ ಶಿಂಧೆ ಸರ್ಕಾರ

Lingaraj Badiger

ಮುಂಬೈ: ರಾಜ್ಯದಲ್ಲಿನ ಪ್ರಕರಣಗಳ ತನಿಖೆಗೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆದಿದ್ದ ಹಿಂದಿನ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ನಿರ್ಧಾರವನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ.

ಈ ಮೂಲಕ ಕೇಂದ್ರ ತನಿಖಾ ಸಂಸ್ಥೆಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಶಿಂಧೆ ಸರ್ಕಾರ ಮರುಸ್ಥಾಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆಯುವ ಎಂವಿಎ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಗೃಹ ಇಲಾಖೆಯ ಪ್ರಸ್ತಾವನೆಗೆ ಸಿಎಂ ಶಿಂಧೆ ಅನುಮತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ(ಸಿಎಂಒ)ಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದಾಗಿ ಸಿಬಿಐ ರಾಜ್ಯದಲ್ಲಿ ಯಾವುದೇ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 21, 2020 ರಂದು, ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ ಕೇಂದ್ರ ಸರ್ಕಾರವು ರಾಜಕೀಯ ಲಾಭಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಾದದ ಅಡಿಯಲ್ಲಿ ಸಿಬಿಐಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಹಿಂಪಡೆದಿತ್ತು.

SCROLL FOR NEXT