ದೇಶ

ಹೈದರಾಬಾದ್: 4 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ; ಶಾಲೆಯ ಮಾನ್ಯತೆ ರದ್ದುಪಡಿಸಿದ ಸರ್ಕಾರ

Vishwanath S

ಹೈದರಾಬಾದ್: 4 ವರ್ಷದ ಬಾಲಕಿಯ ಮೇಲೆ ಎರಡು ತಿಂಗಳ ಕಾಲ ಅತ್ಯಾಚಾರವೆಸಗಿದ ಆರೋಪದ ಮೇಲೆ ಖಾಸಗಿ ಶಾಲೆಗೆ ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಿ, ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುವಂತೆ  ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಆದೇಶಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಯಾವ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ತೆಲಂಗಾಣದ ಶಿಕ್ಷಣ ಕಾರ್ಯದರ್ಶಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವರು ಆದೇಶಿಸಿದ್ದಾರೆ.

ಸಮಿತಿಯಲ್ಲಿ ಶಾಲಾ ಶಿಕ್ಷಣ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಗೆ ವ್ಯವಹರಿಸುವ ಹಿರಿಯ ಅಧಿಕಾರಿಯನ್ನು ಇರಲಿದ್ದು ವಾರದೊಳಗೆ ವರದಿ ಸಲ್ಲಿಸಲಿದೆ.

ಅತ್ಯಾಚಾರ ಘಟನೆ ಬಹಿರಂಗವಾದ ನಂತರ ಬಂಜಾರಾ ಹಿಲ್ಸ್‌ನ ಶಾಲೆಯನ್ನು ಮುಚ್ಚಲಾಗಿದೆ. ಎರಡು ತಿಂಗಳಿನಿಂದ ಮಗುವಿನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲಾ ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಗಿದೆ. ದೌರ್ಜನ್ಯದ ಬಗ್ಗೆ ನೀಡಿದ ದೂರಿನ ಬಗ್ಗೆ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವರದಿಯಾಗಿದೆ.

ಮಗುವಿನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ಪೋಷಕರು ಆ ಬಗ್ಗೆ ವಿಚಾರಿಸಿದಾಗ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನನ್ನು ಕ್ಯಾಂಪಸ್‌ನಲ್ಲಿರುವ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ಪೋಷಕರ ಜೊತೆ ಶಾಲೆಗೆ ತೆರಳಿದಾಗ ವಿದ್ಯಾರ್ಥಿನಿ ಚಾಲಕನನ್ನು ಬೊಟ್ಟು ಮಾಡಿ ತೋರಿಸಿತ್ತು. ಇದರಿಂದ ಕೋಪಗೊಂಡ ಪೋಷಕರು ಚಾಲಕನ ಮೇಲೆ ಹಲ್ಲೆ ನಡೆಸಿ ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದು, ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ.

SCROLL FOR NEXT