ದೇಶ

ಚೆನ್ನೈ: ಚರಂಡಿ ಕಾಮಗಾರಿಗಾಗಿ ಅಗೆದಿದ್ದ ಕಂದಕಕ್ಕೆ ಬಿದ್ದು ಯುವ ಪತ್ರಕರ್ತ ಸಾವು

Ramyashree GN

ಚೆನ್ನೈ: ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಆಕಸ್ಮಿಕವಾಗಿ ಬಿದ್ದು ಯುವ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. 25 ವರ್ಷದ ಎಸ್. ಮುತ್ತುಕೃಷ್ಣನ್ ಅವರು ತಮಿಳು ಸುದ್ದಿ ವಾಹಿನಿಯ ಪುತಿಯಾ ತಲೈಮುರೈ ಡಿಜಿಟಲ್ ವಿಭಾಗದ ಕಂಟೆಂಟ್ ಎಡಿಟರ್ ಆಗಿದ್ದರು.

ಶನಿವಾರ ರಾತ್ರಿ ಕೆಲಸ ಮುಗಿಸಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪೆರುಂಗುಡಿ ಬಳಿಯ ಕಂದನಚಾವಡಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಶೋಕನಗರದ ಥಿಯೇಟರ್ ಬಳಿ ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ.

ಚರಂಡಿ ಕಾಮಗಾರಿಗಾಗಿ ತೋಡಿದ ಗುಂಡಿಯ ಮೇಲಿಂದ ನೆಗೆಯಲು ಯತ್ನಿಸಿದಾಗ ಕಾಲು ಜಾರಿ ಬಿದ್ದಿದ್ದಾರೆ. ಆದಾಗ್ಯೂ, ಅವರು ಮೇಲೇರಿದ್ದಾರೆ. ಗೆಳೆಯರಿಗೆ ಕರೆ ಮಾಡಿ ಬಿದ್ದ ವಿಷಯ ತಿಳಿಸಿ ಮನೆಗೆ ತೆರಳಿದ್ದಾರೆ. ಆತನನ್ನು ಭೇಟಿಯಾಗಲು ಹೋಗಿದ್ದ ಸ್ನೇಹಿತರು ಅಸ್ವಸ್ಥನಾಗಿದ್ದ ಆತನನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದಿದ್ದಾರೆ.

ಕ್ಲಿನಿಕ್‌ನಲ್ಲಿರುವ ವೈದ್ಯರು ಶೀಘ್ರವೇ ಆಸ್ಪತ್ರೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಕೊನೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಬಾಹ್ಯ ರಕ್ತಸ್ರಾವವಾಗದ ಕಾರಣ, ಮುತ್ತುಕೃಷ್ಣನಿಗೆ ಗಾಯದ ಪ್ರಮಾಣವು ತಿಳಿದಿರಲಿಲ್ಲ. ಸಮಯ ಕಳೆದಂತೆ ಅವರ ಸ್ಥಿತಿಯು ಹದಗೆಟ್ಟಿತು' ಎಂದು ಹೇಳಿದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಎಂಜಿಆರ್ ನಗರ ಠಾಣೆ ಪೊಲೀಸರು, ಮುತ್ತುಕೃಷ್ಣನ್ ತೆಂಕಶಿ ಜಿಲ್ಲೆಯ ಪುಳಿಯಂಗುಡಿ ಮೂಲದವರು. ರಾಜ್ಯ ಹೆದ್ದಾರಿ ಇಲಾಖೆ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜನರನ್ನು ಎಚ್ಚರಿಸಲು ಬ್ಯಾರಿಕೇಡ್‌ಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರರು ಹರಾಜು ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು. ‘ಸಮಸ್ಯೆಯನ್ನು ಪರಿಶೀಲಿಸುತ್ತೇವೆ’ ಎಂದು ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮುತ್ತುಕೃಷ್ಣನ್ ಅವರ ತಂದೆ ತಾಯಿಗೆ ಒಬ್ಬನೇ ಮಗ. ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.

ಅವರು ಪುತಿಯಾ ತಲೈಮುರೈಗೆ ಸೇರುವ ಮೊದಲು ವಿಕಟನ್ ಗ್ರೂಪ್ ಮತ್ತು ಥಂತಿ ಟಿವಿಯಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದು, ಆದೇಶಕ್ಕಾಗಿ ಕಾಯುತ್ತಿದ್ದರು ಎಂದು ಅವರ ಕೆಲಸ ಮಾಡುತ್ತಿದ್ದ ಸ್ಥಳದ ಮೂಲಗಳು ತಿಳಿಸಿವೆ. ಆದರೂ, ಆತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಧ್ಯೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಸಂಜೆ ಮುತ್ತುಕೃಷ್ಣನ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ 2 ಲಕ್ಷ ರೂ. ಮತ್ತು ಪತ್ರಕರ್ತರ ಕುಟುಂಬ ಲಾಭ ನಿಧಿಯಿಂದ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

SCROLL FOR NEXT