ದೇಶ

ರಾಜ್ಯಪಾಲ ಆರಿಫ್ ಖಾನ್ ಆರ್'ಎಸ್ಎಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಸಿಎಂ ಪಿಣರಾಯಿ ವಿಜಯನ್

Manjula VN

ಪಾಲಕ್ಕಾಡ್ (ಕೇರಳ): ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಮತ್ತು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಆರೋಪಿಸಿದ್ದಾರೆ. 

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಪಿಣರಾಯಿ ವಿಜಯನ್ ಅವರು ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯಪಾಲರು ಕುಲಪತಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ತನಗಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಉಪಕುಲಪತಿಗಳ ಅಧಿಕಾರದ ಮೇಲೆ ಅತಿಕ್ರಮಣವಾಗಿದೆ. ರಾಜ್ಯಪಾಲರ ಹುದ್ದೆಯು ಸಂವಿಧಾನದ ಘನತೆಯನ್ನು ಎತ್ತಿಹಿಡಿಯ ಬೇಕೇ ಹೊರತು ಸರ್ಕಾರದ ವಿರುದ್ಧ ನಡೆಯಬಾರದು. ರಾಜ್ಯಪಾಲರು ಆರ್'ಎಸ್ಎಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ಹೇಳಿದ್ದಾರೆ. 

ಇತ್ತೀಚೆಗೆ ಸುಪ್ರೀಂ ಕೋರ್ಟ್, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಉಪಕುಲಪತಿ ನೇಮಕವನ್ನು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು 9 ವಿವಿಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. 

ವಿವಿಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಸೋಮವಾರ ಬೆಳಿಗ್ಗೆ 11.30 ರ ವೇಳೆಗೆ ಉಪಕುಲಪತಿಗಳ ರಾಜೀನಾಮೆ ತಮಗೆ ತಲುಪಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

SCROLL FOR NEXT