ದೇಶ

ಯಾವುದೇ ಉಪಕುಲಪತಿಗಳನ್ನೂ ವಜಾಗೊಳಿಸಿಲ್ಲ; ಗೌರವಾನ್ವಿತ ನಿರ್ಗಮನಕ್ಕೆ ಆಯ್ಕೆ ನೀಡಲಾಗಿದೆ- ಕೇರಳ ರಾಜ್ಯಪಾಲ

Srinivas Rao BV

ತಿರುವನಂತಪುರಂ: ಯಾವುದೇ ಉಪಕುಲಪತಿಗಳನ್ನೂ ವಜಾಗೊಳಿಸಿಲ್ಲ ಎಂದು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 9 ವಿವಿಗಳ ಕುಲಪತಿಗಳಿಗೆ ಗೌರವಾನ್ವಿತ ನಿರ್ಗಮನಕ್ಕೆ ಆಯ್ಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ರಾಜಭವನದಿಂದ ಈಗಾಗಲೇ 9 ವಿವಿಗಳ ಉಪಕುಲಪತಿಗಳಿಗೆ ಅವರ ನೇಮಕಾತಿಯನ್ನು ಅನೂರ್ಜಿತಗೊಳಿಸಬಾರದೇಕೆ? ಎಂದು ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ, ಇದರೊಂದಿಗೆ ಸುಪ್ರೀಂ ಕೋರ್ಟ್ ನ ಆದೇಶವನ್ನೂ ಲಗತ್ತಿಸಲಾಗಿದೆ. ಪ್ರತಿಕ್ರಿಯೆ ನೀಡಲು ಉಪಕುಲಪತಿಗಳಿಗೆ ನ.03 ರ ಸಂಜೆ 5 ವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

9 ವಿವಿಗಳ ಉಪಕುಲಪತಿಗಳ ನೇಮಕಾತಿ ಅಸಿಂಧು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ನಾನು ಪ್ರತ್ಯೇಕವಾಗಿ ಅವರನ್ನು ವಜಾಗೊಳಿಸಬೇಕಿಲ್ಲ. ನಾನು ಅವರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನಷ್ಟೇ ನೀಡಿದ್ದೇನೆ, ಅವರಿಗೆ ಬೇಕಾದಲ್ಲಿ ನಾನು ಅವರು ಏನು ಹೇಳುತ್ತಾರೋ ಅದನ್ನು ಆಲಿಸುತ್ತೆನೆ, ಅವರು ನೀಡುವ ಕಾರಣಗಳನ್ನು ಪರಿಗಣಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ. 
 
ಇತ್ತೀಚೆಗೆ ಸುಪ್ರೀಂ ಕೋರ್ಟ್, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಉಪಕುಲಪತಿ ನೇಮಕವನ್ನು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು 9 ವಿವಿಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ವಿವಿಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಸೋಮವಾರ ಬೆಳಿಗ್ಗೆ 11.30 ರ ವೇಳೆಗೆ ಉಪಕುಲಪತಿಗಳ ರಾಜೀನಾಮೆ ತಮಗೆ ತಲುಪಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

SCROLL FOR NEXT