ದೇಶ

ಪಶ್ಚಿಮ ಬಂಗಾಳ: ಸ್ಫೋಟಕ ಘಟಕ ಪತ್ತೆ ಮಾಡಿದ ಮಕ್ಕಳ ಮೇಲೆ ಬಾಂಬ್ ದಾಳಿ, ಐವರಿಗೆ ಗಾಯ

Ramyashree GN

ಕೋಲ್ಕತ್ತ: ತಾವು ಸಂಗ್ರಹಿಸುತ್ತಿದ್ದ ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಕಚ್ಚಾ ಬಾಂಬ್ ಎಸೆದ ಪರಿಣಾಮ ಐವರು ಮಕ್ಕಳು ಗಾಯಗೊಂಡಿದ್ದಾರೆ. ಯುವಕರಿಗೆ ಚೂರು ಗಾಯಗಳಾಗಿವೆ.

ದಕ್ಷಿಣ 24 ಪರಗಣದ ನರೇಂದ್ರಪುರದಲ್ಲಿ ಘಟನೆ ನಡೆದಿದ್ದು, ಕೆಲವು ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಸಂಗ್ರಹಿಸುತ್ತಿದ್ದ ಮಣ್ಣಿನ ಗುಡಿಸಲನ್ನು ಕಂಡ ಹುಡುಗರು ಕುತೂಹಲದಿಂದ ಗೋಡೆಯ ರಂಧ್ರಗಳ ಮೂಲಕ ಇಣುಕಿ ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ಆಟವಾಡುತ್ತಿದ್ದ ವೇಳೆ ಗುಡಿಸಲಿನ ಹತ್ತಿರ ಹೋಗಿ ಅಕ್ರಮ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಶಂಕಿತರು ಮೊದಲಿಗೆ ಬಾಲಕರನ್ನು ಬೆದರಿಸಿ ಮನೆಗೆ ಹೋಗುವಂತೆ ಹೇಳಿದ್ದಾರೆ. ಆದರೆ, ಕುತೂಹಲದಿಂದಾಗಿ ಬಾಲಕರು ಗುಡಿಸಲಿನ ಸುತ್ತಲೂ ತಿರುಗಾಡಿದ್ದಾರೆ. ಈವೇಳೆ ಇದ್ದಕ್ಕಿದ್ದಂತೆ ದುಷ್ಕರ್ಮಿಗಳು ಅವರ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ನರೇಂದ್ರಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿಯ ಸುದ್ದಿ ಹರಡುತ್ತಿದ್ದಂತೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಅಪ್ರಾಪ್ತರು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ಈಮಧ್ಯೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಎರಡು ಗುಂಪುಗಳ ನಡುವೆ ಪೈಪೋಟಿ ಇದ್ದು, ಕಚ್ಛಾ ಬಾಂಬ್‌ಗಳ ದಾಸ್ತಾನು ಒಂದರ ಭಾಗವಾಗಿದೆ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಗಾಯಗೊಂಡ ಅರ್ನಾಬ್ ಹಲ್ದಾರ್ (13), ಸೂರ್ಯ ಚೌಧರಿ (13), ಬಿಕ್ರಮ್ ನಸ್ಕರ್ ( 12), ಸುಮನ್ ದಾಸ್ (12) ಮತ್ತು ಲಾಲ್ತು ಆಡಿ (13) ಅವರನ್ನು ಚಿಕಿತ್ಸೆಗಾಗಿ ಸಮೀಪದ ಬಘಜತಿನ್ ರಾಜ್ಯ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಜಲಮೂಲಗಳು ಮತ್ತು ಜೌಗು ಪ್ರದೇಶಗಳಿಂದ ಕೂಡಿದ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಟಿಎಂಸಿಯ ಸೋನಾರ್‌ಪುರ ಪಂಚಾಯತ್ ಸಮಿತಿ ಅಧ್ಯಕ್ಷ ಪ್ರಬೀರ್ ಸರ್ಕಾರ್ ಮತ್ತು ಸ್ಥಳೀಯ ಪಂಚಾಯತ್ ಸದಸ್ಯ ಬಾಸುದೇಬ್ ಮೊಂಡಲ್ ಅವರು ದೀರ್ಘಕಾಲದ ಪೈಪೋಟಿಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೊಂಡಲ್‌ನ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಜಗಧಾತ್ರಿ ಪೂಜೆಯನ್ನು ಆಯೋಜಿಸುವ ಬಗ್ಗೆ ಪೈಪೋಟಿ ಕಾಣಿಸಿಕೊಂಡಿದೆ ಮತ್ತು ಸರ್ಕಾರ್ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಪರದಾಡುತ್ತಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಶುಕ್ರವಾರ ಬೆಳಗ್ಗೆ ಸರ್ಕಾರ್ ಅವರ ಅನುಯಾಯಿಗಳು ಪೂಜಾ ಮಂಟಪವನ್ನು ಕೆಡವಿದರು ಮತ್ತು ಸಂಜೆ ನಂತರ ಅವರು ಆ ಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಬಾಂಬ್‌ಗಳನ್ನು ಎಸೆದರು ಎಂದು ಮೊಂಡಲ್ ಆರೋಪಿಸಿದ್ದಾರೆ. ಆದರೆ, ಸರ್ಕಾರ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಸಿಪಿಎಂನ ದಕ್ಷಿಣ 24 ಪರಗಣ ಜಿಲ್ಲಾ ಕಾರ್ಯದರ್ಶಿ ಶಮಿಕ್ ಲಾಹಿರಿ ಮಾತನಾಡಿ, ರಾಜ್ಯವನ್ನು ಈಗ ದುಷ್ಕರ್ಮಿಗಳು ನಡೆಸುತ್ತಿದ್ದಾರೆ ಮತ್ತು ಮಕ್ಕಳನ್ನು ಸಹ ಉಳಿಸುತ್ತಿಲ್ಲ ಎಂದಿದ್ದಾರೆ.

ಪೊಲೀಸರು ಇದುವರೆಗೆ ಏಳು ಜನರನ್ನು ಬಂಧಿಸಿ ಅಪಾರ ಪ್ರಮಾಣದ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT