ದೇಶ

ಆತುರ ಬಿದ್ದ ಒರೆವಾ ಕಂಪನಿ: ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ತೂಗುಸೇತುವೆ ಸಂಚಾರಕ್ಕೆ ಮುಕ್ತ!

Shilpa D

ಗುಜರಾತ್‌: ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗುಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಪುನಃ ಮುಕ್ತಗೊಳಿಸುವ ಮುನ್ನ ಪುರಸಭೆಯಿಂದ ಅರ್ಹತಾ (ಫಿಟ್‌ನೆಸ್‌) ಪ್ರಮಾಣಪತ್ರ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶತಮಾನದಷ್ಟು ಹಳೆಯದಾದ ಈ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದು 132  ಮಂದಿ ಸಾವನ್ನಪ್ಪಿದ್ದಾರೆ. 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ 230 ಮೀಟರ್‌ ಉದ್ದದ ಈ ಸೇತುವೆಯನ್ನು ನವೀಕರಣದ ಸಲುವಾಗಿ ಕಳೆದ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್‌ 26) ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.

'ಸೇತುವೆಯ ನಿರ್ವಹಣೆಯನ್ನು 15 ವರ್ಷಗಳ ಅವಧಿಗೆ ಒರೆವಾ ಕಂಪನಿಗೆ ನೀಡಲಾಗಿತ್ತು. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ನವೀಕರಣ ಕಾರ್ಯ ಆರಂಭಿಸಿದ್ದರಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನವೀಕರಣದ ಕಾರ್ಯ ಮುಗಿದ ನಂತರ ಅಕ್ಟೋಬರ್‌ 26ರಂದು ಪುನಃ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆಯು ಇನ್ನೂ ಅರ್ಹತಾ ಪ್ರಮಾಣಪತ್ರ ನೀಡಿರಲಿಲ್ಲ' ನಮ್ಮ ಗಮನಕ್ಕೆ ತಾರದೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ ಎಂದು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್‌ಸಿನ್ಹ ಝಾಲ ಹೇಳಿದ್ದಾರೆ.

‘ಭಾನುವಾರ ರಜೆ ಇದ್ದ ಕಾರಣ ಭಾರಿ ಸಂಖ್ಯೆಯ ಪ್ರವಾಸಿಗರು ಸೇತುವೆ ಮೇಲೆ ಸೇರಿದ್ದರು.  ಜನರ ಭಾರ ತಾಳಲಾರದೆ ಸಂಜೆ 6.30ರ ಸುಮಾರಿಗೆ ಅದು ಮುರಿದು ಬಿದ್ದಿದೆ. ಸೇತುವೆ ಮೇಲಿದ್ದವರ ಪೈಕಿ ಬಹುಪಾಲು ಮಂದಿ ನದಿಗೆ ಬಿದ್ದರೆ, ಕೆಲವರು ಹಗ್ಗ ಹಿಡಿದು ನೇತಾಡುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮೋರ್ಬಿ ಕೇಬಲ್ ಸೇತುವೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಸೇತುವೆ ಮೇಲೆ ಜನರು ಕಿಕ್ಕಿರಿದು ತುಂಬಿರುವುದು ಕಾಣಬಹುದಾಗಿದೆ. ಇನ್ನು ಕೆಲ ಯುವಕರು ಹುಚ್ಚಾಟ ಮೆರೆದಿದ್ದಾರೆ. ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ಸರಳುಗಳನ್ನು ಕಾಲಿನಿಂದ ಒದೆಯುತ್ತಿರುವುದು ಮೊಬೈಲ್ ನಲ್ಲಿ ಸೆರೆಯಾಗಿದೆ.

SCROLL FOR NEXT