ದೇಶ

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 'ಎರಡು ಬೆರಳಿನ ಪರೀಕ್ಷೆ' ನಡೆಸದಿರಿ: ಕೇಂದ್ರ-ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Manjula VN

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಪರೀಕ್ಷಿಸುವ "ಎರಡು ಬೆರಳಿನ ಪರೀಕ್ಷೆ" ಪದ್ಧತಿ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ದುರದೃಷ್ಟಕರ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಇಂತಹ ಪರೀಕ್ಷೆ ನಡೆಸದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚನೆ ನೀಡಿದೆ.

ಅತ್ಯಾಚಾರ ಮತ್ತು ಕೊಲೆ ಆರೋಪಿಯನ್ನು ಖುಲಾಸೆಗೊಳಿಸಿದ ಜಾರ್ಖಂಡ್ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ರದ್ದುಗೊಳಿಸಿದ್ದು, ಅವರನ್ನು ಅಪರಾಧಿ ಎಂದು ಪರಿಗಣಿಸುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

ಸಂತ್ರಸ್ತ ಮಹಿಳೆಯ ಲೈಂಗಿಕ ಇತಿಹಾಸದ ಸಾಕ್ಷ್ಯವು ಪ್ರಕರಣಕ್ಕೆ ವಸ್ತುವಲ್ಲ. ಈ ಪರೀಕ್ಷೆಯನ್ನು ಇಂದಿಗೂ ನಡೆಸುತ್ತಿರುವುದು ವಿಷಾದನೀಯ' ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು.

ಈ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. ಯೋನಿ ಸಡಿಲತೆಯನ್ನು ಪರೀಕ್ಷಿಸುವ ವಿಧಾನವು ಮಹಿಳೆಯರನ್ನು ಪುನಃ ಬಲಿಪಶುಗೊಳಿಸುತ್ತದೆ ಮತ್ತು ಮರು ಆಘಾತಗೊಳಿಸುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯನ್ನು ಅತ್ಯಾಚಾರ ಮಾಡಲಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ" ಎಂದು ಪೀಠ ಹೇಳಿದೆ.

ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವ ನ್ಯಾಯಾಲಯವರು, "ಎರಡು ಬೆರಳು ಪರೀಕ್ಷೆ" ನಡೆಸದಂತೆ ನೋಡಿಕೊಳ್ಳಲು ರಾಜ್ಯಗಳ ಡಿಜಿಪಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡುವಂತೆ ತಿಳಿಸಿದೆ.

ಅಲ್ಲದೆ, ಎರಡು ಬೆರಳು ಪರೀಕ್ಷೆಯನ್ನು ನಡೆಸುವ ಯಾವುದೇ ವ್ಯಕ್ತಿಯನ್ನು ದುರ್ನಡತೆಯ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದು, ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಿಂದ ಎರಡು ಬೆರಳಿನ ಪರೀಕ್ಷೆಯ ಅಧ್ಯಯನವನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯದ ಆರೋಗ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

SCROLL FOR NEXT