ದೇಶ

ಅಸ್ವಸ್ಥರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಯಿಂದ ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ!

Ramyashree GN

ಭುವನೇಶ್ವರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡುವ ಮೊದಲು ಕಟಕ್‌ನ ಆಸ್ಪತ್ರೆಯೊಳಗೆ ನೃತ್ಯ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೃದ್ಧೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಕೂಡ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

'ನನಗೆ ನೃತ್ಯ ಮಾಡಲು ಇಷ್ಟವಿರಲಿಲ್ಲ ಆದರೆ, ಅದನ್ನು ಮಾಡಲು ಒತ್ತಾಯಿಸಲಾಯಿತು. ನಾನು ಪದೇ ಪದೆ ನಿರಾಕರಿಸಿದೆ, ಆದರೆ ಅವಳು (ಬೆಹೆರಾ) ಕೇಳಲಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ದಣಿದಿದ್ದೇನೆ' ಎಂದು ಕಮಲಾ ಪೂಜಾರಿ ಅವರು ಕೊರಾಪುಟ್ ಜಿಲ್ಲೆಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾದರೆ, ನಮ್ಮ ಸಮಾಜದವರು ಬೀದಿಗಿಳಿಯಲಿದ್ದಾರೆ ಎಂದು ಬುಡಕಟ್ಟು ಸಮುದಾಯದ ‘ಪರಜಾ ಸಮಾಜ’ದ ಅಧ್ಯಕ್ಷ ಹರೀಶ್ ಮುದುಳಿ ಹೇಳಿದ್ದಾರೆ.

ಸಾವಯವ ಕೃಷಿಗೆ ಉತ್ತೇಜನ ಮತ್ತು ಭತ್ತ ಸೇರಿದಂತೆ ವಿವಿಧ ಬೆಳೆಗಳ 100ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019 ರಲ್ಲಿ ಪೂಜಾರಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುಣಮುಖರಾದ ಅವರು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಈ ಘಟನೆ ನಡೆದಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೊಂದಿಗೆ ಹಲವಾರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಬೆಹೆರಾ ಅವರ ಪರಿಚಯವಿಲ್ಲ ಎಂದು ಪೂಜಾರಿ ಅವರ ಸಹಾಯಕರಾದ ರಾಜೀಬ್ ಹಿಯಾಲ್ ಹೇಳಿದ್ದಾರೆ.

ಬೆಹೆರಾ, ಕಮಲಾ ಪೂಜಾರಿ ಅವರಿಂದ ನೃತ್ಯ ಮಾಡಿಸಿದ್ದರ ಹಿಂದೆ ತನ್ನ ಕಡೆಯಿಂದ ಯಾವುದೇ ಕೆಟ್ಟ ಉದ್ದೇಶವಿಲ್ಲ ಮತ್ತು ಪೂಜಾರಿ ಅವರ ಸೋಮಾರಿತನವನ್ನು ದೂರವಿಡಲೆಂದು' ಹಾಗೆ ಮಾಡಿದ್ದಾಗಿ ತಿಳಿಸಿದ್ದಾರೆ.

ಪೂಜಾರಿ ಒಡಿಶಾದ ಪ್ರಮುಖ ಪರಿಶಿಷ್ಟ ಪಂಗಡವಾದ ಪರಜಾ ಸಮುದಾಯಕ್ಕೆ ಸೇರಿದವರು. ಈ ಸಮುದಾಯವು ರಾಜ್ಯದ ಬುಡಕಟ್ಟು ಜನಸಂಖ್ಯೆಯ ಸುಮಾರು 4 ಪ್ರತಿಶತವನ್ನು ಒಳಗೊಂಡಿದೆ.

SCROLL FOR NEXT