ದೇಶ

ಸೈರಸ್ ಮಿಸ್ತ್ರಿ ಸಾವು: 2021 ರಲ್ಲಿ ದೇಶದಲ್ಲಿ ಒಟ್ಟು 1.55 ಲಕ್ಷಕ್ಕೂ ಹೆಚ್ಚು ಜನ ಅಪಘಾತಕ್ಕೆ ಬಲಿ

Lingaraj Badiger

ನವದೆಹಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ದೇಶದಲ್ಲಿ ಅಪಘಾತಕ್ಕೆ ಬಲಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2021 ರಲ್ಲಿ ಅಪಘಾತದಲ್ಲಿ ದಾಖಲೆಯ 1.55 ಲಕ್ಷ ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.

54 ವರ್ಷದ ಮಿಸ್ತ್ರಿ ಅವರು ಇಂದು ಮಧ್ಯಾಹ್ನ ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡಿಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿಯ ಪ್ರಕಾರ, 2021 ರಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ - ದಿನಕ್ಕೆ ಸರಾಸರಿ 426 ಅಥವಾ ಪ್ರತಿ ಗಂಟೆಗೆ 18 ಜನ ಅಪಘಾತಕ್ಕೆ ಬಲಿಯಾಗಿದ್ದಾರೆ.

ಇದುವರೆಗೆ ಒಂದು ವರ್ಷದಲ್ಲಿ ಅಪಘಾತಗಳಲ್ಲಿ ದಾಖಲಾದ ಅತ್ಯಧಿಕ ಸಾವು ಇದಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಸಾವಿನ ಜೊತೆಗೆ, ಕಳೆದ ವರ್ಷ ದೇಶಾದ್ಯಂತ ಸಂಭವಿಸಿದ 4.03 ಲಕ್ಷ 'ರಸ್ತೆ ಅಪಘಾತ'ಗಳಲ್ಲಿ 3.71 ಲಕ್ಷ ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

SCROLL FOR NEXT