ದೇಶ

ಭಾರೀ ಮಳೆಯಿಂದ ಜಮ್ಮುವಿನಲ್ಲಿ ಭೂ ಕುಸಿತ, ಜಮ್ಮು- ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಂದ್

Nagaraja AB

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮುವಿನ ವಿವಿಧೆಡೆ ಶನಿವಾರ ಇಡೀ ರಾತ್ರಿ ಭಾರೀ ಮಳೆಯಾಗಿದ್ದು, ಅನೇಕ ಕಡೆಗಳಲ್ಲಿ ಭೂಕುಸಿತವಾಗಿದೆ. ಇದರಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆಫೆಟೇರಿಯಾ ಮತ್ತು ಮೆಹದ್ ಬಳಿ ಭೂಕೂಸಿತ ಹಾಗೂ ಬೆಟ್ಟ ಗುಡ್ಡಗಳಿಂದ ಭಾರೀ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬೀಳುತ್ತಿರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ ಹೆದ್ದಾರಿಯನ್ನು ಶೀಘ್ರವಾಗಿ ಸುಗಮಗೊಳಿಸುವ  ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಹಲವು ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. 

ಕಳೆದ 24 ಗಂಟೆಗಳಲ್ಲಿ ಜಮ್ಮು ನಗರದಲ್ಲಿ 95.7 ಮಿಮೀ, ಉದಂಪುರದಲ್ಲಿ 92.6 ಮಿಮೀ, ಮತ್ತು ಕಥುವಾದಲ್ಲಿ 42.0 ಮಿಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಯಾಸಿ ಜಿಲ್ಲೆಯ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೂಲ ಶಿಬಿರವಾದ ಕತ್ರಾದಲ್ಲಿ 14 ಮಿಮೀ ಮಳೆಯಾಗಿದೆ.

ಮುಂದಿನ 48 ಗಂಟೆಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಹಲವು ಸ್ಥಳಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. 

SCROLL FOR NEXT