ದೇಶ

22 ವರ್ಷದ ಆಫ್ರಿಕನ್ ಮೂಲದ ಮಹಿಳೆಯಲ್ಲಿ ಮಂಕಿಪಾಕ್ಸ್; ದೆಹಲಿಯಲ್ಲಿ ಆರನೇ ಪ್ರಕರಣ ವರದಿ

Ramyashree GN

ನವದೆಹಲಿ: ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಮಂಕಿಪಾಕ್ಸ್‌ ವೈರಸ್ ತಗುಲಿರುವುದು ಪತ್ತೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾಗಿರುವ ಆರನೇ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆಯನ್ನು ಆಗಸ್ಟ್ 31 ರಂದು ದೆಹಲಿ ಸರ್ಕಾರದ ಲೋಕನಾಯಕ ಜೈ ಪ್ರಕಾಶ್ ನಾರಾಯಣ (ಎಲ್‌ಎನ್‌ಜೆಪಿ) ಆಸ್ಪತ್ರೆಯ ಪ್ರತ್ಯೇಕ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಮಾತನಾಡಿ, ಮಹಿಳೆಯು ಇತ್ತೀಚೆಗೆ ಯಾವುದೇ ಅಂತರರಾಷ್ಟ್ರೀಯ ಪ್ರಯಾಣವನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

'ಮಹಿಳೆ ಕಳೆದ ಜನವರಿಯಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ಅಂದಿನಿಂದ ದ್ವಾರಕಾದಲ್ಲಿಯೇ ನೆಲೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ಜ್ವರ, ಗಂಟಲು ನೋವು ಮತ್ತು ಚರ್ಮದ ಮೇಲೆ ಗಾಯಗಳ ಬಗ್ಗೆ ದೂರು ನೀಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ರೋಗಲಕ್ಷಣಗಳು ಮಂಕಿಪಾಕ್ಸ್ ಅನ್ನು ಹೋಲುವ ಕಾರಣ ಹೆಚ್ಚಿನ ಪರೀಕ್ಷೆಗಾಗಿ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದೆವು. ಪ್ರಯೋಗಾಲಯದ ವರದಿಯಲ್ಲಿ ಆಕೆಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಅವರು ಹೇಳಿದರು.

'ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಈ ಪ್ರಕರಣ ಮಾತ್ರ ಇದೆ. ಇತರ ಎಲ್ಲಾ ಐದು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೊನೆಯ ಪ್ರಕರಣವನ್ನು ಆಗಸ್ಟ್‌ ತಿಂಗಳ ಕೊನೆಯ ವಾರವಷ್ಟೇ ಬಿಡುಗಡೆ ಮಾಡಲಾಗಿದೆ' ಎಂದು ಅವರು ಹೇಳಿದರು.

ದೆಹಲಿಯಲ್ಲಿ ವರದಿಯಾಗಿರುವ ಎಲ್ಲಾ ಆರು ಪ್ರಕರಣಗಳಲ್ಲಿ ತಲಾ ಮೂವರು ಪುರುಷರು ಮತ್ತು ಮಹಿಳೆಯರಾಗಿದ್ದಾರೆ. ಪುರುಷ ಮತ್ತು ಸ್ತ್ರೀಲಿಂಗದ ರೋಗಿಗಳ ಸಮಾನ ಅನುಪಾತವು ಈ ರೋಗವು ಪ್ರಧಾನವಾಗಿ ಸಲಿಂಗಕಾಮಿ ಪುರುಷರಲ್ಲಿ ಕಂಡುಬರುತ್ತದೆ ಎಂಬ ಸಾಮಾನ್ಯ ಕಲ್ಪನೆಯನ್ನು ತೊಡೆದುಹಾಕಿದೆ ಎಂದು ಆಸ್ಪತ್ರೆಯ ಐಸೋಲೇಷನ್ ವಿಭಾಗದ ವೈದ್ಯರು ತಿಳಿಸಿದ್ದಾರೆ.

'ಇದು ನಿಕಟ ದೈಹಿಕ ಸಂಪರ್ಕದಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಭಾರತದಲ್ಲಿ ವರದಿಯಾದ ಪ್ರಕರಣಗಳಲ್ಲಿ ಇದುವರೆಗೆ ಲೈಂಗಿಕತೆ ಮತ್ತು ಲಿಂಗ ಅಸಮಾನತೆಯ ಯಾವುದೇ ಪಾತ್ರವಿಲ್ಲ' ಎಂದು ಆಸ್ಪತ್ರೆಯ ಮುಖ್ಯ ಅಪಘಾತ ವೈದ್ಯಕೀಯ ಅಧಿಕಾರಿ ಡಾ. ರೀತು ಸಕ್ಸೇನಾ ಹೇಳಿದ್ದಾರೆ.

ದೆಹಲಿಯಲ್ಲಿ ಈವರೆಗೆ ದೃಢಪಡಿಸಿದ ಎಲ್ಲಾ ರೋಗಿಗಳ ವಯಸ್ಸು 20 ರಿಂದ 35 ವರ್ಷಗಳು. ಎಲ್ಲಾ ರೋಗಿಗಳು ಸೋಂಕಿನ ಸೌಮ್ಯವಾದ ಲಕ್ಷಣಗಳಿಂದ ಬಳಲುತ್ತಿದ್ದರು ಮತ್ತು ಅದರಿಂದ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಸೋಂಕು ಆಗಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಇತರ ಮನುಷ್ಯರಿಗೆ ಮತ್ತು ಪರಿಸರದಿಂದ ಮನುಷ್ಯರಿಗೆ ಹರಡಬಹುದು ಎಂದಿದೆ.

SCROLL FOR NEXT