ದೇಶ

ಮದರಸಾದಲ್ಲಿ ಭಯೋತ್ಪಾದನಾ ಚಟುವಟಿಕೆ; ಸ್ಥಳೀಯರಿಂದಲೇ ನೆಲಸಮ!

Nagaraja AB

ಗುವಾಹಟಿ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಮದರಸಾವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿದ್ದಾರೆಂದು ಆರೋಪಿಸಿ ಸ್ಥಳೀಯರು ನೆಲಸಮಗೊಳಿಸಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳಾದ ಅಮಿನುಲ್ ಇಸ್ಲಾಂ ಮತ್ತು ಜಹಾಂಗೀರ್ ಅಲೋಮ್ ಅಲ್ ಖೈದಾ ಅಂಗಸಂಸ್ಥೆಯ ಸದಸ್ಯರಾಗಿದ್ದಾರೆ. ಅವರು 2020-22 ರ ನಡುವೆ ಮದರಸಾದಲ್ಲಿ ಕಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮಿನುಲ್ ಇಸ್ಲಾಂ ಮತ್ತು ಜಹಾಂಗೀರ್ ಅಲೋಮ್ ಸದ್ಯ ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಪಖಿಯುರಾ ಚಾರ್ ಪ್ರದೇಶದ ಮದರಸಾದ ಪಕ್ಕದ ಮನೆಯನ್ನು ಸಹ ನೆಲಸಮಗೊಳಿಸಲಾಗಿದೆ. ಮದರಸಾ ಧ್ವಂಸದಲ್ಲಿ ಸ್ಥಳೀಯರೇ ಭಾಗಿಯಾಗಿದ್ದು, ಯಾವುದೇ ಸರ್ಕಾರಿ ಅಧಿಕಾರಿಗಳು ಧ್ವಂಸದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮದರಸಾದಲ್ಲಿ ಬೋಧನೆ ಮಾಡಲು ಇಬ್ಬರು ಅಲ್ ಖೈದಾ ಸದಸ್ಯರನ್ನು ಸೇರಿಸಿಕೊಂಡಿದ್ದ ಧರ್ಮಗುರು ಜಲಾಲುದ್ದೀನ್ ಸೇಖ್ ನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಮತ್ತು ಜಿಹಾದಿ ಸ್ಲೀಪರ್ ಸೆಲ್ ಗಳನ್ನು ಸ್ಥಾಪಿಸುವ ಪ್ರಯತ್ನಗಳ ಆರೋಪದ ಮೇಲೆ ಕಳೆದ ಒಂದು ತಿಂಗಳಲ್ಲಿ ನೆಲಸಮಗೊಂಡ ನಾಲ್ಕನೇ ಅಸ್ಸಾಂ ಮದರಸಾ ಇದಾಗಿದೆ.

ಕಳೆದ ತಿಂಗಳು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಹೇಳಿದ್ದರು. ಅಸ್ಸಾಂನ ಮಸೀದಿಗಳು ಮತ್ತು ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಕರು ಹೊರ ರಾಜ್ಯದಿಂದ ಬಂದರೆ ಸರ್ಕಾರಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಘೋಷಿಸಿದರು. ಈ ವರ್ಷದ ಮಾರ್ಚ್‌ನಿಂದ, ಅಸ್ಸಾಂ ಪೊಲೀಸರು 40 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಮತ್ತು ಕಟ್ಟುನಿಟ್ಟಾದ ಕಾವಲು ಕಾಯುತ್ತಿದ್ದಾರೆ.
 

SCROLL FOR NEXT