ದೇಶ

ಉಗ್ರ ಯಾಕೂಬ್ ಮೆಮೊನ್ ಸಮಾಧಿ ಸೌಂದರ್ಯೀಕರಣ; ತನಿಖೆಗೆ ಆದೇಶ 

Srinivas Rao BV

ಮುಂಬೈ: 1993 ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮೊನ್ ಸಮಾಧಿಯ ಸೌಂದರ್ಯೀಕರಣದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.

ಯಾಕೂಬ್ ಮೆಮೊನ್ ಸಮಾಧಿಯನ್ನು ಅಲಂಕಾರ ಮಾಡುವ ಮೂಲಕ ಅದನ್ನು ಒಂದು ರೀತಿಯ ಆರಾಧನೆಯ ಜಾಗವನ್ನಾಗಿ ಮಾಡುವ ಯತ್ನ ನಡೆಸಲಾಗಿತ್ತು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. 

ಭಯೋತ್ಪಾದಕನ ಸಮಾಧಿಯ ಸುತ್ತ ಅಳವಡಿಸಲಾಗಿದ್ದ ಎಲ್ಇಡಿ ದೀಪಗಳನ್ನು ಮುಂಬೈ ಪೊಲೀಸರು ತೆರವುಗೊಳಿಸಿದ್ದಾರೆ. ಯಾಕೂಬ್ ಮೆಮೊನ್ ನ್ನು 2015 ರಲ್ಲಿ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು ಹಾಗೂ ದಕ್ಷಿಣ ಮುಂಬೈ ನ ಬಾಬಾ ಕಬರ್ಸ್ತಾನ್ ನಲ್ಲಿ ಸಮಾಧಿ ಮಾಡಲಾಗಿತ್ತು.

ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿ ಎಲ್ಇಡಿ ದೀಪಗಳ ಅಳವಡಿಕೆ, ಮಾರ್ಬಲ್ ಟೈಲ್ ಗಳನ್ನು ಹಾಕಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬಿಜೆಪಿ ನಾಯಕರು ಈ ಘಟನೆಗೆ ಉದ್ಧವ್ ಠಾಕ್ರೆ ಸರ್ಕಾರವನ್ನು ಹೊಣೆ ಮಾಡಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇದ್ದಾಗ ಭಯೋತ್ಪಾದಕನ ಸಮಾಧಿಯನ್ನು ಸಿಂಗರಿಸಲಾಗಿದೆ ಎಂದು ಆರೋಪಿಸಿದ್ದರೆ, ಠಾಕ್ರೆ ನೇತೃತ್ವದ ಶಿವಸೇನೆ, ಹಣದುಬ್ಬರ ಹಾಗೂ ನಿರುದ್ಯೋಗಗಳಿಂದ ವಿಷಯಾಂತರ ಮಾಡಲು ಬಿಜೆಪಿ ಈ ವಿಷಯವನ್ನಿಟ್ಟುಕೊಂಡು ಆರೋಪಿಸುತ್ತಿದೆ ಎಂದು ಹೇಳಿದೆ.

ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಂಕುಳೆ, 250 ಮಂದಿ ಸಾವಿಗೆ ಕಾರಣನಾದ ಯಾಕೂಬ್ ಮೆಮೊನ್ ಸಮಾಧಿ ಸೌಂದರ್ಯೀಕರಣದ ಯತ್ನ ನಡೆದಿರುವುದಕ್ಕೆ ಮಹಾರಾಷ್ಟ್ರ ಮತ್ತು ಮುಂಬೈ ಜನತೆಯಲ್ಲಿ ಉದ್ಧವ್ ಠಾಕ್ರೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. 
 

SCROLL FOR NEXT