ದೇಶ

ಮದರಸಾ ಸಮೀಕ್ಷೆಯ ನೆಪದಲ್ಲಿ ಬಿಜೆಪಿ ಮುಸ್ಲಿಮರಿಗೆ ಬೆದರಿಕೆಯೊಡ್ಡುತ್ತಿದೆ: ಮಾಯಾವತಿ

Ramyashree GN

ಲಖನೌ: ಉತ್ತರ ಪ್ರದೇಶದಲ್ಲಿ ಖಾಸಗಿ ಮದರಸಾಗಳ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಮತ್ತು ಸಮೀಕ್ಷೆಗಳನ್ನು ನಡೆಸುವ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಬೆದರಿಕೆಯೊಡ್ಡುತ್ತಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಶುಕ್ರವಾರ ಆರೋಪಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಮುಸ್ಲಿಂ ಸಮುದಾಯವನ್ನು ಶೋಷಣೆ, ನಿರ್ಲಕ್ಷ್ಯ ಮತ್ತು ಗಲಭೆಗಳಿಂದ ಬಾಧಿಸಲಾಗುತ್ತಿದೆ ಎಂಬ ದೂರುಗಳು ಕಾಂಗ್ರೆಸ್ ಕಾಲದಿಂದಲೂ ಕೇಳಿಬರುತ್ತಿವೆ ಮತ್ತು ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿಯಿಂದಲೂ ದಬ್ಬಾಳಿಕೆ ಮತ್ತು ಬೆದರಿಕೆ ಉಂಟಾಗುತ್ತಿದೆ. ಬಿಜೆಪಿಯವರು ತುಷ್ಟೀಕರಣದ ಹೆಸರಿನಲ್ಲಿ ಸಂಕುಚಿತ ರಾಜಕಾರಣ ಮಾಡುತ್ತಿದ್ದಾರೆ. ಇದು ದುಃಖದ ಮತ್ತು ಖಂಡನೀಯ' ಎಂದು ದೂರಿದ್ದಾರೆ.

'ಉತ್ತರಪ್ರದೇಶದ ಮದರಸಾಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸರ್ಕಾರವು ಕೆಟ್ಟ ಉದ್ದೇಶವನ್ನು ಹೊಂದಿದೆ. ಸಮುದಾಯದ ದೇಣಿಗೆಯ ಮೇಲೆ ನಡೆಯುತ್ತಿರುವ ಖಾಸಗಿ ಮದರಸಾಗಳಲ್ಲಿ ಸಮೀಕ್ಷೆಯ ಹೆಸರಿನಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಗಳು ಅನುಚಿತವಾಗಿದೆ. ಅವರು (ಬಿಜೆಪಿ) ಸರ್ಕಾರಿ ಮತ್ತು ಸರ್ಕಾರಿ ನೆರವಿನ ಮದರಸಾಗಳ ಸ್ಥಿತಿಯನ್ನು ಸುಧಾರಿಸುವತ್ತ ಗಮನಹರಿಸಬೇಕು' ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಸರ್ಕಾರವು ಇತ್ತೀಚೆಗೆ ರಾಜ್ಯದಲ್ಲಿ ಮದರಸಾಗಳಲ್ಲಿ ಲಭ್ಯವಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು 'ಗುರುತಿಸದ' ಮದರಸಾಗಳ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಘೋಷಿಸಿತು.

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ಸಮೀಕ್ಷೆ ನಡೆಸಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ.

ಸಮೀಕ್ಷೆಯ ಸಮಯದಲ್ಲಿ, ಮದರಸಾದ ಹೆಸರು ಮತ್ತು ಅದನ್ನು ನಿರ್ವಹಿಸುತ್ತಿರುವ ಸಂಸ್ಥೆ, ಅದು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆಯೇ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕುಡಿಯುವ ನೀರು, ಪೀಠೋಪಕರಣಗಳು, ವಿದ್ಯುತ್ ಸರಬರಾಜು ಮತ್ತು ಶೌಚಾಲಯದ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಮದರಸಾದಲ್ಲಿರುವ ಶಿಕ್ಷಕರ ಸಂಖ್ಯೆ, ಅದರ ಪಠ್ಯಕ್ರಮ, ಆದಾಯದ ಮೂಲ ಮತ್ತು ಯಾವುದೇ ಸರ್ಕಾರೇತರ ಸಂಸ್ಥೆಯೊಂದಿಗೆ ಅದರ ಸಂಬಂಧದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅನ್ಸಾರಿ ಹೇಳಿದ್ದಾರೆ.

ಈ ಕ್ರಮವನ್ನು ಟೀಕಿಸಿದ ಪ್ರಮುಖ ಮುಸ್ಲಿಂ ಸಾಮಾಜಿಕ ಧಾರ್ಮಿಕ ಗುಂಪು ಜಮಿಯತ್ ಉಲಮಾ-ಇ-ಹಿಂದ್, ರಾಜ್ಯದಲ್ಲಿ ಮದರಸಾಗಳ ಸಮೀಕ್ಷೆಯನ್ನು ನಡೆಸುವ ಕ್ರಮವು ಶಿಕ್ಷಣ ವ್ಯವಸ್ಥೆಯನ್ನು ಅವಹೇಳನ ಮಾಡುವ 'ದುರುದ್ದೇಶಪೂರಿತ ಪ್ರಯತ್ನ' ಎಂದು ಇತ್ತೀಚೆಗೆ ಹೇಳಿತ್ತು.

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಈ ಪೈಕಿ 560ಕ್ಕೆ ಸರ್ಕಾರದ ಅನುದಾನ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊಸ ಮದರಸಾಗಳು ಅನುದಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

SCROLL FOR NEXT