ದೇಶ

ಬಿಜೆಪಿಗೆ ತಿರುಗುಬಾಣ ಬಿಟ್ಟ ಟಿಎಂಸಿ; ಭಾರತದ ಅತಿದೊಡ್ಡ ಪಪ್ಪು ಅಮಿತ್ ಶಾ ಎಂದಿರುವ ಟೀ ಶರ್ಟ್‌ ಹಂಚಿಕೆ

Ramyashree GN

ಕೋಲ್ಕತ್ತಾ: ಅಮಿತ್ ಶಾ ಅವರ ಚಿತ್ರದೊಂದಿಗೆ ಭಾರತದ ದೊಡ್ಡ ಪಪ್ಪು ಎಂದು ಬರೆದಿರುವ ಟೀಶರ್ಟ್ ಮೂಲಕ ತೃಣಮೂಲ ಕಾಂಗ್ರೆಸ್ ತನ್ನ ಎದುರಾಳಿ ಬಿಜೆಪಿಯ ಅಮಿತ್ ಶಾ ಅವರನ್ನು ವ್ಯಂಗ್ಯವಾಡಿದ್ದು, ಈ ಟೀ ಶರ್ಟ್‌ಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

'ಭಾರತದ ಅತಿ ದೊಡ್ಡ ಪಪ್ಪು' ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ನಾಯಕನ ಮುಖದ ಕಾರ್ಟೂನ್ ಚಿತ್ರವನ್ನು ಹೊಂದಿರುವ ಟಿ-ಶರ್ಟ್ ಬಿಳಿ, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಕಂಡುಬಂದಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಈಗ ಅಮಿತ್ ಶಾ ಅವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸುತ್ತಿರುವ 'ಪಪ್ಪು' ಎಂಬ ವಿಶೇಷಣವನ್ನು ಈ ಹಿಂದೆ ಬಿಜೆಪಿಯು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬ್ರಾಂಡ್ ಆಗಿ ಮಾಡಿತ್ತು.

ಮುಂಬರುವ ದುರ್ಗಾ ಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಂಡಲ್ ಕುಣಿತಕ್ಕಾಗಿ ರಸ್ತೆಗಳಿಗೆ ಬಂದಾಗ ಈ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸಲು ಪಕ್ಷವು ಉತ್ಸುಕವಾಗಿದೆ ಎನ್ನಲಾಗಿದೆ.

'ಅಪಹಾಸ್ಯ ಮಾಡುವುದು ಸಂವಹನದ ಅತ್ಯಂತ ಶಕ್ತಿಯುತ ರೂಪವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಕಾಮೆಂಟ್‌ನಿಂದ ಪ್ರಾರಂಭವಾಯಿತು ಮತ್ತು ಇದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಯಿತು. ನಂತರ ಅದು ಟಿ-ಶರ್ಟ್‌ಗಳಲ್ಲಿ ಬಂದಿತು' ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರಿಯಾನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ತನಿಖೆ ನಡೆಸುತ್ತಿದೆ. ಕಳೆದ ವಾರ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸೆಪ್ಟೆಂಬರ್ 2ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರನ್ನು ಭಾರತದ ಅತಿದೊಡ್ಡ ಪಪ್ಪು ಎಂದು ಬಣ್ಣಿಸಿದ್ದರು.

ಮರುದಿನವೇ, ಬ್ಯಾನರ್ಜಿ ಅವರ ಸೋದರ ಸಂಬಂಧಿಗಳಾದ ಆಕಾಶ್ ಬ್ಯಾನರ್ಜಿ ಮತ್ತು ಅದಿತಿ ಗಯೆನ್ ಅವರು ಶಾ ಅವರ ಕಾರ್ಟೂನ್ ಮತ್ತು ಘೋಷಣೆಯೊಂದಿಗೆ ಟಿ-ಶರ್ಟ್‌ಗಳನ್ನು ಧರಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಟಿಎಂಸಿ ಮೂಲಗಳು ಹೇಳುವಂತೆ ಅಭಿಷೇಕ್ ಬ್ಯಾನರ್ಜಿ ಅವರು ಯುವ ಪಕ್ಷದ ಕಾರ್ಯಕರ್ತರಿಗೆ ಹೊಸ ವಿನ್ಯಾಸದ ಉಡುಪುಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ಪ್ರತಿಯೊಂದಕ್ಕೆ ಸುಮಾರು 300 ರೂಪಾಯಿಗಳ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

'ಆರಂಭದಲ್ಲಿ ಈ ಟಿಶರ್ಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದವು. ಈಗ, ಅವುಗಳನ್ನು ಸಗಟು ಮಾರುಕಟ್ಟೆಗಳಲ್ಲಿ ಪಡೆಯಬಹುದು. ಸದ್ಯ ಮೂರ್ನಾಲ್ಕು ವಿನ್ಯಾಸಗಳು ಲಭ್ಯವಿದ್ದು, ದುರ್ಗಾ ಪೂಜೆ ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಗೆ ಬರಲಿವೆ ಎಂದು ಸ್ವತಃ ಒ'ಬ್ರಿಯಾನ್ ಅವರೇ, ಫೋಟೋಗಳು ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿರುವ ವಿಡಿಯೋ ಹಾಕಿದ್ದಾರೆ. ಸಂಸತ್ ಭವನದ ಬಳಿ ಚಿತ್ರೀಕರಿಸಿದ ವಿಡಿಯೋವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

'ಕಾಲೇಜು ವಿದ್ಯಾರ್ಥಿಗಳು ಮತ್ತು 25 ವರ್ಷಕ್ಕಿಂತ ಹೆಚ್ಚಿಲ್ಲದ ಯುವ ಪಕ್ಷದ ಉತ್ಸಾಹಿಗಳು ಆ ಟೀ-ಶರ್ಟ್‌ಗಳನ್ನು ರಚಿಸುತ್ತಿದ್ದಾರೆ. ಅವರ ಹೆಸರು ಹೇಳಲು ಬಯಸುವುದಿಲ್ಲ. ಆದರೆ ವಿನ್ಯಾಸಗಳು ಮಾತ್ರ ಮನಸೆಳೆಯುವಂತಿದೆ ಎಂದು ನಾನು ಹೇಳುತ್ತೇನೆ' ಎಂದು ' ಎಂದು ಒ'ಬ್ರಿಯಾನ್ ಹೇಳಿಕೊಂಡಿದ್ದಾರೆ.

'ಕಾಂಗ್ರೆಸ್ ಕೂಡ ಈ ಪ್ರಚಾರವನ್ನು ಇಷ್ಟಪಡಬೇಕು. ಬಿಜೆಪಿಯು ಕಾಂಗ್ರೆಸ್ ನಾಯಕನನ್ನು ಅಪಹಾಸ್ಯ ಮಾಡಲು ಈ ಪದವನ್ನು ಬಳಸಿತು. ಈಗ ಬಿಜೆಪಿ ಮರಳಿ ತಮ್ಮದೇ ಔಷಧವನ್ನು ಪಡೆಯುತ್ತಿದೆ' ಎಂದಿದ್ದಾರೆ.

ಇಂತಹ ಪ್ರಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ ರಾಹುಲ್ ಸಿನ್ಹಾ, ಈ 'ವೈಯಕ್ತಿಕ ದಾಳಿ' ಒಂದು ಫ್ಲಾಪ್ ಶೋ. ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿಗೆ ಯಾವುದೇ ವಿಚಾರಗಳಿಲ್ಲ. ಅದಕ್ಕಾಗಿಯೇ ಅವರು ವೈಯಕ್ತಿಕವಾಗಿ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರ ಪಕ್ಷವು ಅಂತ್ಯದತ್ತ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

SCROLL FOR NEXT