ದೇಶ

ಏಳು ದಶಕಗಳ ನಂತರ ಭಾರತಕ್ಕೆ ಮರು ಆಗಮನ: ನಮೀಬಿಯಾದಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಗೆ ಬಂದಿಳಿದ 8 ಚೀತಾಗಳು

Sumana Upadhyaya

ಗ್ವಾಲಿಯರ್ (ಮಧ್ಯ ಪ್ರದೇಶ): ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಏಳು ದಶಕಗಳ ನಂತರ ಭಾರತಕ್ಕೆ ಎಂಟು ಚೀತಾಗಳು ಶನಿವಾರ ದೇಶಕ್ಕೆ ಬಂದಿಳಿದಿವೆ. ನಿನ್ನೆ ರಾತ್ರಿ ನಮೀಬಿಯಾದಿಂದ ಮಾರ್ಪಡಿಸಿದ ಬೋಯಿಂಗ್ ವಿಮಾನದಲ್ಲಿ ಸುಮಾರು 10 ಗಂಟೆಗಳ ಪ್ರಯಾಣದ ಸಮಯದಲ್ಲಿ ವಿಶೇಷ ಮರದ ಪೆಟ್ಟಿಗೆಗಳಲ್ಲಿ ಚೀತಾಗಳನ್ನು ಮಧ್ಯ ಪ್ರದೇಶದ ಗ್ವಾಲಿಯರ್ ಗೆ ಕರೆತರಲಾಯಿತು. 

ವಿಮಾನವು ಗ್ವಾಲಿಯರ್ ವಾಯುನೆಲೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಂದಿಳಿಯಿತು. ಅಲ್ಲಿಂದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲಾಗಿದೆ. ಅಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 10.45 ಕ್ಕೆ ಉದ್ಯಾನದ ಕ್ವಾರಂಟೈನ್ ಆವರಣಗಳಲ್ಲಿ ಮೂರು ಚೀತಾಗಳನ್ನು ಬಿಡುತ್ತಾರೆ.

ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಗ್ವಾಲಿಯರ್‌ನಿಂದ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೊಗೆ ಚೀತಾಗಳನ್ನು ಬಿಡಲಾಗುತ್ತಿದ್ದು, ಪ್ರಯಾಣವು ಸುಮಾರು 20-25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡುವ ಮೋದಿ ಕಾರ್ಯಕ್ರಮದ ಸಿದ್ಧತೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಭಾರೀ ಮಳೆ, ಪ್ರತಿಕೂಲ ಹವಾಮಾನಗಳ ನಡುವೆ ಸಾಕಷ್ಟು ಕೆಲಸ ಮಾಡಿದ್ದಾರೆ.  ಎರಡು ದಿನಗಳ ಮೊದಲು ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.

ಗ್ವಾಲಿಯರ್ ನಲ್ಲಿ ಚೀತಾಗಳನ್ನು ಕರೆತರಲು ಬೇಕಾದ ಅಗತ್ಯ ಕೆಲಸ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಚೀತಾಗಳನ್ನು ಎರಡು ಹೆಲಿಕಾಪ್ಟರ್‌ಗಳು, ಚಿನೂಕ್ ಮತ್ತು ಎಂಐ ಕೆಟಗರಿ ಹೆಲಿಕಾಪ್ಟರ್‌ಗಳಲ್ಲಿ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಪಾಲ್ಪುರ್ ಗ್ರಾಮಕ್ಕೆ ಕಳುಹಿಸಲಾಗುತ್ತದೆ. ಪಾಲ್ಪುರ್‌ನಿಂದ, ಚೀತಾಗಳನ್ನು ರಸ್ತೆಯ ಮೂಲಕ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ತರಲಾಗುವುದು ಎಂದು ಚೌಹಾಣ್ ಹೇಳಿದ್ದರು. 

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಚೀತಾ ಖಂಡಾಂತರ ಸ್ಥಳಾಂತರ ಯೋಜನೆಯು ನಡೆಯುತ್ತಿದೆ. ಎಂಟು ಚೀತಾಗಳಲ್ಲಿ ಐದು ಹೆಣ್ಣು ಮತ್ತು ಮೂರು ಗಂಡು - ನಮೀಬಿಯಾದಿಂದ 'ಪ್ರಾಜೆಕ್ಟ್ ಚೀತಾ' ಭಾಗವಾಗಿ ತರಲಾಗುತ್ತಿದೆ, ಇದು ವಿಶ್ವದ ಮೊದಲ ಅಂತರ್-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮೀಬಿಯಾದಲ್ಲಿರುವ ಭಾರತದ ಹೈ ಕಮಿಷನರ್ ಪ್ರಶಾಂತ್ ಅಗರವಾಲ್, ಇದು ನಿಜಕ್ಕೂ ಬಹಳ ವಿಶೇಷವಾದ ಕ್ಷಣವಾಗಿದೆ. ಈ ಭವ್ಯವಾದ ಚೀತಾಗಳು ಭಾರತಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಿದೆ ಎಂದರು. ಇದು ಜಾಗತಿಕವಾಗಿ ಮೊದಲನೆಯದು. ಭಾರತವು ಈ ವರ್ಷ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ ಎಂದು ಅಗರವಾಲ್ ಹೇಳಿದರು.

ಸ್ಥಳಾಂತರ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ ಡಾ ಲಾರಿ ಮಾರ್ಕರ್ ನೇತೃತ್ವದ ಚೀತಾ ಸಂರಕ್ಷಣಾ ನಿಧಿಯ (CCF) ತಂಡಕ್ಕೆ ಭಾರತೀಯ ರಾಯಭಾರಿ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಧಾನಿ ಮೋದಿ ಅವರು ಈಗಾಗಲೇ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ, ಅಲ್ಲಿ ಅವರು 10.45 ರ ಸುಮಾರಿಗೆ ಚೀತಾಗಳನ್ನು ಕ್ವಾರಂಟೈನ್ ಆವರಣಕ್ಕೆ ಬಿಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT