ದೇಶ

ಬಿಹಾರದಲ್ಲಿ ಲಾಕ್ ಅಪ್ ಡೆತ್: ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಗುಂಪು ದಾಳಿ, 7 ಸಿಬ್ಬಂದಿಗಳಿಗೆ ಗಂಭೀರ ಗಾಯ

Srinivas Rao BV

ಕಥಿಹಾರ್: ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೋರ್ವ ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. 

ಬಿಹಾರದ ಕಥಿಹಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರಿಂದ ನಡೆದ ಗುಂಪು ಹಲ್ಲೆಯಲ್ಲಿ ಇಬ್ಬರು ಸ್ಟೇಷನ್ ಹೌಸ್ ಅಧಿಕಾರಿಗಳು (ಎಸ್ ಹೆಚ್ಒ) ಸೇರಿದಂತೆ 7 ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದ 40 ವರ್ಷದ ಪ್ರಮೋದ್ ಕುಮಾರ್ ಸಿಂಗ್, ಸಾವನ್ನಪ್ಪಿದ್ದು ಇದರಿಂದ ಕೆರಳಿದ ಗ್ರಾಮಸ್ಥರು ಪ್ರಾಣ್ ಪುರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದಾರೆ.

ಮದ್ಯ ನಿಷೇಧಗೊಂಡಿರುವ ಬಿಹಾರದಲ್ಲಿ ಆತ ಮದ್ಯದ ಬಾಟಲ್ ಗಳನ್ನು ಹೊಂದಿದ್ದ ಎಂಬ ಆರೋಪದ ಮೇಲೆ ಪ್ರಮೋದ್ ಕುಮಾರ್ ಸಿಂಗ್ ನ್ನು ಬಂಧಿಸಲಾಗಿತ್ತು.  ಮನಿತೋಷ್ ಕುಮಾರ್, ಶೈಲೇಶ್ ಕುಮಾರ್ ಗ್ರಾಮಸ್ಥರ ಹಲ್ಲೆಯಿಂದ ಗಾಯಗೊಂಡ ಎಸ್ ಹೆಚ್ಒ ಗಳಾಗಿದ್ದಾರೆ.

ಗಾಯಗೊಂಡ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನೂ ಕಥಿಹಾರ್ ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ಘಟನಾ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸ್ ತಂಡಗಳು ಪ್ರದೇಶದಲ್ಲಿ ಇವೆ ಎಂದು ಹಂಗಾಮಿ ಎಸ್ ಪಿ ದಯಾಶಂಕರ್ ಹೇಳಿದ್ದಾರೆ.

ಮದ್ಯದ ಬಾಟಲಿಗಳನ್ನು ಹೊಂದಿದ್ದ ಸಿಂಗ್ ನ್ನು ಕೋರ್ಟ್ ಗೆ ಹಾಜರುಪಡಿಸಲು ಅಗತ್ಯವಿದ್ದ ಕಡತಗಳನ್ನು ಸಿದ್ಧಪಡಿಸುತ್ತಿದ್ದಾಗ ಆತನ ಮೃತದೇಹ ಪತ್ತೆಯಾಗಿತ್ತು ಎಂದು ದಯಾಶಂಕರ್ ತಿಳಿಸಿದ್ದಾರೆ. ಸಿಂಗ್ ಸಾವಿನ ಸುದ್ದಿ ತಲುಪುತ್ತಿದ್ದಂತೆಯೇ, ಗ್ರಾಮಸ್ಥರು, ದೊಣ್ಣೆ ಹಾಗೂ ಕಬ್ಬಿಣದ ರಾಡ್ ಮುಂತಾದ ಮಾರಕಾಸ್ತ್ರಗಳೊಂದಿಗೆ ಬಂದು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ 7 ಸಿಬ್ಬಂದಿಗಳನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ. ಸಿಂಗ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

SCROLL FOR NEXT