ನವದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಬಿಜೆಪಿಯು ವೃದ್ಧರನ್ನು ಅವಲಂಬಿತರನ್ನಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲಾಗುತ್ತದೆ ಎಂದು ಭರವಸೆ ನೀಡಿದ ಅವರು, ಇದು ರಾಷ್ಟ್ರವನ್ನು ಬಲಪಡಿಸುವ ಸರ್ಕಾರಿ ನೌಕರರ ಹಕ್ಕು ಎಂದು ಹೇಳಿದರು.
'ಹಳೆಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಮೂಲಕ ಬಿಜೆಪಿ ವಯೋವೃದ್ಧರನ್ನು ಅವಲಂಬಿತರನ್ನಾಗಿ ಮಾಡಿದೆ. ದೇಶವನ್ನು ಬಲಪಡಿಸುವ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿಯನ್ನು ಪಡೆಯುವ ಹಕ್ಕಿದೆ. 'ನಾವು ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಿದ್ದೇವೆ. ಈಗ ಗುಜರಾತ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ ಮತ್ತು ಹಳೆಯ ಪಿಂಚಣಿಯನ್ನು ತರಲಿದೆ' ಎಂದು ರಾಹುಲ್ ಗಾಂಧಿಯವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, #CongressDegiOldPension ಎಂಬ ಹ್ಯಾಶ್‌ಟ್ಯಾಗ್ ಹಂಚಿಕೊಂಡಿದ್ದಾರೆ.
ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಮಾತನಾಡಿ, 'ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದಂತೆ ಗುಜರಾತ್‌ನಲ್ಲಿಯೂ ತಮ್ಮ ಪಕ್ಷವು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಸೋಮವಾರ ಹೇಳಿದ್ದಾರೆ.
ಗುಜರಾತ್‌ನಲ್ಲಿ ಸಾವಿರಾರು ನಿವೃತ್ತ ಸರ್ಕಾರಿ ನೌಕರರು ಇತ್ತೀಚೆಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿ, ಆಗದಿರಲಿ, ಅವರಿಗೆ ಪಕ್ಷದಲ್ಲಿ ಯಾವಾಗಲೂ 'ಪ್ರಧಾನ ಸ್ಥಾನ': ಚಿದಂಬರಂ
ಇನ್ನು ಕೆಲವೇ ತಿಂಗಳುಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.