ದೇಶ

ಪಂಚ ರಾಜ್ಯಗಳ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಮಾಡಿದ ವೆಚ್ಚ ಎಷ್ಟು ಗೊತ್ತಾ?

Nagaraja AB

ನವದೆಹಲಿ: ಇದೇ ವರ್ಷದ ಆರಂಭದಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಿಜೆಪಿ ಸುಮಾರು ರೂ. 340 ಕೋಟಿ ವೆಚ್ಚ ಮಾಡಿದರೆ, ಕಾಂಗ್ರೆಸ್ ರೂ. 190 ಕೋಟಿಗಿಂತಲೂ ಹೆಚ್ಚಿನ ಹಣವನ್ನು ವ್ಯಯಿಸಿದೆ. ಉಭಯ ಪಕ್ಷಗಳ ಚುನಾವಣಾ ವೆಚ್ಚದ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ. 

ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರೂ. 340 ಕೋಟಿ ಗೂ ಹೆಚ್ಚಿನ ಮೊತ್ತದ ಹಣವನ್ನು ವೆಚ್ಚ ಮಾಡಿರುವುದಾಗಿ ಚುನಾವಣಾ ಆಯೋಗ ಬಿಜೆಪಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.  

340 ಕೋಟಿ ರೂ. ಪೈಕಿ ರೂ. 221 ಕೋಟಿ ರೂ. ಗಳನ್ನು ಉತ್ತರ ಪ್ರದೇಶದಲ್ಲಿಯೇ ವೆಚ್ಚ ಮಾಡಲಾಗಿದೆ. ಮಣಿಪುರದಲ್ಲಿ ರೂ. 23 ಕೋಟಿ, ಉತ್ತರಾಖಂಡ್ ನಲ್ಲಿ ರೂ. 43. 67 ಕೋಟಿ ಮತ್ತು ಪಂಜಾಬ್ ನಲ್ಲಿ 36 ಕೋಟಿಗೂ ಹೆಚ್ಚು ಹಾಗೂ ಗೋವಾದಲ್ಲಿ ರೂ. 19 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ವ್ಯಯಿಸಿರುವುದಾಗಿ ಬಿಜೆಪಿ ವೆಚ್ಚದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕಾಂಗ್ರೆಸ್ ಸಲ್ಲಿಸಿರುವ ವರದಿ ಪ್ರಕಾರ, ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮತ್ತಿತರ ಕಾರ್ಯಗಳಿಗಾಗಿ  ರೂ. 194 ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ದೇಶದಲ್ಲಿನ ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳಾಗಿವೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಗಳು ತಮ್ಮ ಚುನಾವಣಾ ವೆಚ್ಚದ ವರದಿಯನ್ನು ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. 

SCROLL FOR NEXT