ದೇಶ

ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಬಂಧನ

Manjula VN

ಚೆನ್ನೈ: ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದ ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಒಬ್ಬರನ್ನು ಚೆನ್ನೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಕಲಾಕ್ಷೇತ್ರ ಫೌಂಡೇಶನ್‌ನ ಮಾಜಿ ವಿದ್ಯಾರ್ಥಿನಿಯೊಬ್ಬರಿಗೆ ನೃತ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಭಾನುವಾರ ಕೇಳಿಬಂದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಂತೆ ಇಂದು ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಹರಿ ಪದ್ಮನ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.

ಹರಿ ಪದ್ಮನ್ ವಿರುದ್ಧ ಐಪಿಸಿ ಸೆಕ್ಷನ್ 354ಎ  (ಲೈಂಗಿಕ ಕಿರುಕುಳ), 509 (ಪದಗಳು, ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳು), ಮಹಿಳಾ ಕಿರುಕುಳ ಕಾಯ್ದೆ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹರಿ ಪದ್ಮನ್ ಅವರನ್ನು ಮಾಧವರಂನಲ್ಲಿರುವ ಮನೆಯೊಂದರಲ್ಲಿ ಚೆನ್ನೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಲೈಂಗಿಕ ಕಿರುಕುಳ ಆರೋಪ ಸಂಬಂಧ ಮಾಜಿ ವಿದ್ಯಾರ್ಥಿನಿ ಚೆನ್ನೈನಲ್ಲಿರುವ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಂಧನಕ್ಕೊಳಗಾಗಿರುವ ಹರಿ ಪದ್ಮನ್ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ಗಳನ್ನು ರವಾನಿಸಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ತಾನು ಓದುತ್ತಿದ್ದಾಗ ಅಧ್ಯಾಪಕರು ಕಿರುಕುಳ ನೀಡಿದ್ದರು. ಇದರಿಂದಾಗಿ ನಾನು ನನ್ನ ವಿದ್ಯಾಭ್ಯಾಸವನ್ನೇ ನಿಲ್ಲಿಸಬೇಕಾಯಿತು. ಸಂಸ್ಥೆಯಿಂದ ಹೊರಬಂದರೂ ಬೆನ್ನು ಬಿಡದ ಅಧ್ಯಾಪಕರು, ಕಿರುಕುಳ ನೀಡುವುದನ್ನು ಮುಂದುವರೆಸಿದ್ದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

SCROLL FOR NEXT