ದೇಶ

ಚುನಾವಣೆಯಲ್ಲಿ ಗೆಲ್ಲಬಲ್ಲ ಪ್ರಬಲ ಅಭ್ಯರ್ಥಿಗಳನ್ನು ಮಾತ್ರ ಸಮಿತಿ ಪರಿಗಣಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

Ramyashree GN

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಉಳಿದ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಮಂಗಳವಾರ ಸಭೆ ನಡೆಸುತ್ತಿದೆ.

ಸಭೆಗೂ ಮುನ್ನ ಮಾತನಾಡಿದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ‘ಚುನಾವಣೆಯಲ್ಲಿ ಗೆಲ್ಲುವ ಹಾಗೂ ಎದುರಾಳಿಗೆ ಸಾಕಷ್ಟು ಪೈಪೋಟಿ ನೀಡುವ ಬಲಿಷ್ಠ ಅಭ್ಯರ್ಥಿಗಳ ಹೆಸರನ್ನು ಸಮಿತಿ ಪರಿಗಣಿಸಲಿದೆ. ಸಮಿತಿಯು ಅಭ್ಯರ್ಥಿಗಳ ಹೆಸರುಗಳ ಬಗ್ಗೆ ಒಮ್ಮತಕ್ಕೆ ಆದ್ಯತೆ ನೀಡುತ್ತದೆ' ಎಂದು ತಿಳಿಸಿದರು.

ಪ್ರತಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿರುವುದರಿಂದ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಿರ್ಣಾಯಕವಾಗಿದೆ. ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದ್ದು, ಬಿಜೆಪಿಗೆ ಯಾವುದೇ ಲಾಭವಾಗದಂತೆ ಮುಖಂಡರು ಉಮೇದುವಾರಿಕೆಯನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷವು 100 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಾಯಕರಿಗೆ ಪಕ್ಷವು ಅವಕಾಶ ಕಲ್ಪಿಸಬೇಕು. ಕೆಲವು ನಾಯಕರು ಈಗಾಗಲೇ ಪ್ರತಿಭಟನೆಗಳನ್ನು ನಡೆಸಿದ್ದು, ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ ನಾಯಕರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾದ ನಂತರ ಯಾವುದೇ ದೊಡ್ಡ ಅಪಸ್ವರ ಎದುರಾಗದ ಕಾರಣ ಪಕ್ಷದಲ್ಲಿ ಹುರುಪು ಮೂಡಿದೆ.

SCROLL FOR NEXT