ದೇಶ

ಕೇರಳದ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ವ್ಯಕ್ತಿ: ಮಹಾರಾಷ್ಟ್ರದಲ್ಲಿ ಶಂಕಿತನ ಬಂಧನ

Ramyashree GN

ರತ್ನಗಿರಿ: ಕೇಂದ್ರ ಗುಪ್ತಚರ ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ತಂಡವು ಬುಧವಾರ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದೆ.

'ಕೇರಳ ಪೊಲೀಸರ ತಂಡವೂ ರತ್ನಗಿರಿ ತಲುಪಿದ್ದು, ಆರೋಪಿಯನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು’ ಎಂದು ಮಹಾರಾಷ್ಟ್ರ ಎಟಿಎಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ಸಮಯಕ್ಕೆ ಸರಿಯಾಗಿ ಬಂಧಿಸಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಮತ್ತು ಆರ್‌ಪಿಎಫ್ ಮತ್ತು ಎನ್‌ಐಎಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಧನ್ಯವಾದ ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿದ್ದ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ರೈಲಿನ ಕೋಚ್‌ಗಳನ್ನು ಪರಿಶೀಲಿಸಿತು.

ಭಾನುವಾರ ರಾತ್ರಿ ಚಲಿಸುತ್ತಿರುವ ರೈಲಿನ ಕಂಪಾರ್ಟ್‌ಮೆಂಟ್‌ನೊಳಗೆ ಅಪರಿಚಿತ ವ್ಯಕ್ತಿಯೊಬ್ಬ ಇತರೆ ಸಹ ಪ್ರಯಾಣಿಕರೊಬ್ಬರ ಮೇಲೆ ಬೆಂಕಿ ಹಚ್ಚಿದ ಬಳಿಕ ಮೂವರು ಸಾವಿಗೀಡಾಗಿದ್ದರು ಮತ್ತು ಹಲವರಿಗೆ ಸುಟ್ಟ ಗಾಯಗಳಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಕೋಯಿಕ್ಕೋಡ್‌ ಜಿಲ್ಲೆಯ ಎಲತ್ತೂರು ಬಳಿ ಆಲಪ್ಪುಳ-ಕಣ್ಣೂರು ಮುಖ್ಯ ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನ ಡಿ 1 ಕಂಪಾರ್ಟ್‌ಮೆಂಟಿನೊಳಗೆ ಶಂಕಿತ ವ್ಯಕ್ತಿ ಪ್ರಯಾಣಿಕರೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಕೇರಳ ಪೊಲೀಸರು ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ಸಿದ್ಧಪಡಿಸಿದ್ದರು. ಪ್ರಕರಣದ ನಿರ್ಣಾಯಕ ಸಾಕ್ಷಿಯಾಗಿರುವ ರಜಾಕ್ ಸಹಾಯದಿಂದ ಕೋಯಿಕ್ಕೋಡ್‌ನ ಎಲತ್ತೂರ್ ಪೊಲೀಸ್ ಠಾಣೆಯಲ್ಲಿ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ.

ಗಾಯಾಳುಗಳಾದ ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಮತ್ತು ಐವರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ ಮೂವರು ಮಹಿಳೆಯರು. 

ಅಪರಿಚಿತ ದುಷ್ಕರ್ಮಿಯೊಬ್ಬ ಪೆಟ್ರೋಲ್ ಅಥವಾ ಸೀಮೆಎಣ್ಣೆಯಂತೆ ವಸ್ತುವನ್ನು ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಗಾಯಗೊಂಡ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಭಾನುವಾರ ರಾತ್ರಿ ಕೋಯಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜಗಳದ ನಂತರ ವ್ಯಕ್ತಿಯೊಬ್ಬ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ್ದಾನೆ.

SCROLL FOR NEXT