ದೇಶ

ನನ್ನನ್ನು ಬಂಧಿಸಲು ಸಿಬಿಐಗೆ ಬಿಜೆಪಿ ಸೂಚನೆ ನೀಡಿದೆ, ಇಂದು ವಿಚಾರಣೆಗೆ ಹಾಜರಾಗಿ ಪ್ರಾಮಾಣಿಕವಾಗಿ ಉತ್ತರ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

Sumana Upadhyaya

ನವದೆಹಲಿ: ತಮ್ಮನ್ನು ಬಂಧಿಸುವಂತೆ ತನಿಖಾ ಸಂಸ್ಥೆಗೆ ಬಿಜೆಪಿ ಆದೇಶ ನೀಡಿರಬಹುದು, ತಾವು ಬಹಳ ಶಕ್ತಿಶಾಲಿಯಾಗಿದ್ದು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಹೇಳಿರಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

ಅವರು ಇಂದು ಸಿಬಿಐ ಮುಂದೆ ತನಿಖೆಗೆ ಹಾಜರಾಗುವ ಮುನ್ನ 5 ನಿಮಿಷಗಳ ವಿಡಿಯೊ ಸಂದೇಶದಲ್ಲಿ, ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಪಟ್ಟಂತೆ ಮುಚ್ಚಿಡುವುದಕ್ಕೆ ಏನೂ ಇಲ್ಲ, ಇಂದು ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಇಂದು ಸಿಬಿಐ ವಿಚಾರಣೆಗೆ ನನ್ನನ್ನು ಬರಲು ಹೇಳಿದ್ದಾರೆ. ಅಲ್ಲಿ ನಾನು ಪ್ರಾಮಾಣಿಕವಾಗಿ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಇವರು ಬಹಳ ಶಕ್ತಿಶಾಲಿಗಳು, ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ. ಅವರು ಅಪರಾಧ ಮಾಡಿದ್ದಾರೋ, ಇಲ್ಲವೋ ಎಂದು ಸಹ ನೋಡುವುದಿಲ್ಲ ಎಂದಿದ್ದಾರೆ.

ನಿನ್ನೆಯಿಂದ ಅವರ ಎಲ್ಲಾ ನಾಯಕರು ದೊಡ್ಡ ಧ್ವನಿಯಿಂದ ಕೇಜ್ರಿವಾಲ್ ಬಂಧನಕ್ಕೊಳಗಾಗುತ್ತಾರೆ ಎಂದು ಕಿರುಚಾಡುತ್ತಿದ್ದಾರೆ. ಕೇಜ್ರಿವಾಲ್ ನನ್ನು ಬಂಧಿಸಬೇಕು ಎಂದು ಬಿಜೆಪಿ ಸೂಚನೆ ನೀಡಿರುವ ಹಾಗಿದೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಬಿಜೆಪಿ ಆದೇಶ ಕೊಟ್ಟ ಮೇಲೆ ಸಿಬಿಐನವರು ಯಾರು, ಸಿಬಿಐ ನನ್ನನ್ನು ಬಂಧಿಸುತ್ತದೆ, ನಾನು ನನ್ನ ದೇಶವನ್ನು, ಭಾರತ ಮಾತೆಯನ್ನು ಪ್ರೀತಿಸುತ್ತೇನೆ. ದೇಶಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅರವಿಂದ್ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

ಇಂದು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನ ಅರವಿಂದ್ ಕೇಜ್ರಿವಾಲ್ ದೆಹಲಿಯ ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.

SCROLL FOR NEXT