ದೇಶ

ನವಿ ಮುಂಬೈ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ 19 ಕಿಮೀ ಎಳೆದೊಯ್ದ ವ್ಯಕ್ತಿ, ಬಂಧನ

Ramyashree GN

ನವಿ ಮುಂಬೈ: ಸಿಗ್ನಲ್‌ ಜಂಪ್ ಮಾಡಿದ ವ್ಯಕ್ತಿಯೊಬ್ಬರು, ವಾಶಿ ಪಟ್ಟಣದಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೋಲೀಸರನ್ನು ತನ್ನ ಕಾರ್ ಬಾನೆಟ್‌ ಮೇಲೆ ಸುಮಾರು 19 ಕಿಲೋಮೀಟರ್‌ಗಳವರೆಗೆ ಎಳೆದುಕೊಂಡು ಹೋದರು ಎಂದು ಅಧಿಕಾರಿಗಳು ಭಾನುವಾರ ಇಲ್ಲಿ ತಿಳಿಸಿದ್ದಾರೆ.

ಆರೋಪಿಯನ್ನು ನೆರೂಲ್ ಪಟ್ಟಣದ ಆದಿತ್ಯ ಭೇಂಡೆ (23) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದ್ದು, ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ 1.45ರ ಸುಮಾರಿಗೆ 37 ವರ್ಷದ ಸಂಚಾರ ಪೊಲೀಸ್ ಅಧಿಕಾರಿ ಸಿದ್ಧೇಶ್ವರ ಮಾಲಿ ಅವರು ಬ್ಲೂ ಡೈಮಂಡ್ ಸ್ಕ್ವಾಡ್‌ನಲ್ಲಿ ಭೇಂಡೆ ಅವರ ವಾಹನವು ಕೆಂಪು ಸಿಗ್ನಲ್‌ ಅನ್ನು ಜಂಪ್ ಮಾಡುವುದನ್ನು ಗಮನಿಸಿದ್ದಾರೆ. ಈವೇಳೆ, ತಡೆಯಲು ಹೋದ ಅವರಿಗೆ ಕಾರು ಡಿಕ್ಕಿಯಾಗಿದೆ. ಬಳಿಕ ಚಾಲಕ ಕಾರನ್ನು ಚಲಿಸಿಕೊಂಡು ಸಾಗಿದ್ದಾನೆ. 

ಬಳಿಕ ಮಾಲಿ ತನ್ನ ಸಹೋದ್ಯೋಗಿ ಕಾನ್‌ಸ್ಟೆಬಲ್ ಶಿಂಧೆಯೊಂದಿಗೆ ತಮ್ಮ ಮೋಟಾರ್‌ಸೈಕಲ್ ಮೇಲೇರಿ ಕಾರನ್ನು ಹಿಂಬಾಲಿಸಿದ್ದಾರೆ ಮತ್ತು ಅಂತಿಮವಾಗಿ ಆತನನ್ನು ಎಎಮ್‌ಪಿಸಿ ಮಾರುಕಟ್ಟೆಯ ಬಳಿ ತಡೆದು ನಿಲ್ಲಿಸಿದ್ದಾರೆ.

ಇಬ್ಬರು ಪೋಲೀಸರು ಭೇಂಡೆಯನ್ನು ಕಾರಿನಿಂದ ಕೆಳಗೆ ಇಳಿಯುವಂತೆ ಆದೇಶಿಸಿದ್ದಾರೆ. ಆದರೂ, ಆತ ಕಾರು ಚಾಲನೆಯನ್ನು ಮುಂದುವರಿಸಿದ್ದಾನೆ. ಈ ವೇಳೆ ಮಾಲಿ ಅವರು ಕಾರಿನ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. 

ಬಳಿಕ ಆರೋಪಿ ಅರೆಂಜಾ ಸರ್ಕಲ್, ಪಾಮ್ ಬೀಚ್ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಸುಮಾರು 19 ಕಿ.ಮೀ. ಕಾರು ಚಲಿಸಿದ್ದಾನೆ.

ನಂತರ ಶಿಂಧೆ ಅವರು ನವಿ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಂಡವು ತಕ್ಷಣವೇ ಭೇಂಡೆ ಅವರ ಕಾರಿನ ಕಡೆಗೆ ಧಾವಿಸಿ, ಅಂತಿಮವಾಗಿ ಆತನನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಕೊಲೆ ಯತ್ನ, ಹಲ್ಲೆ ಅಥವಾ ಕ್ರಿಮಿನಲ್ ಆರೋಪದಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಮತ್ತು ಮಾದಕ ದ್ರವ್ಯ ಕಾಯ್ದೆಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸದ್ಯ ಮಾಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

SCROLL FOR NEXT