ದೇಶ

ಕರ್ನಲ್: ಮೂರು ಅಂತಸ್ತಿನ ರೈಸ್ ಮಿಲ್ ಕಟ್ಟಡ ಕುಸಿದು ನಾಲ್ವರು ವಲಸೆ ಕಾರ್ಮಿಕರು ಸಾವು

Ramyashree GN

ಚಂಡೀಗಢ: ಹರಿಯಾಣದ ಕರ್ನಲ್ ಜಿಲ್ಲೆಯ ತಾರೋರಿಯಲ್ಲಿ ಮಂಗಳವಾರ ಮುಂಜಾನೆ ಮೂರು ಅಂತಸ್ತಿನ ರೈಸ್ ಮಿಲ್ ಕಟ್ಟಡ ಕುಸಿದು ಬಿಹಾರದ ನಾಲ್ವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ 3 ಗಂಟೆ ಸುಮಾರಿಗೆ ಘಟನೆ ನಡೆದಾಗ ಕಟ್ಟಡದಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ಇದ್ದರು.

'ಘಟನೆಯಲ್ಲಿ ಬಿಹಾರದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ' ಎಂದು ಕರ್ನಲ್‌ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

ಘಟನೆಯಲ್ಲಿ ಕಟ್ಟಡದೊಳಗೆ ಒಟ್ಟು 24 ಮಂದಿ ಸಿಲುಕಿಕೊಂಡರು. ಈ ಪೈಕಿ ನಾಲ್ವರು ಸಾವಿಗೀಡಾಗಿದ್ದು, 20 ಮಂದಿಗೆ ಗಾಯವಾಗಿದೆ. ಕೆಲವರು ಸಮಯಕ್ಕೆ ಸರಿಯಾಗಿ ಕಟ್ಟಡದ ಕಿಟಕಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. 

ಕಟ್ಟಡದ ರಚನೆಯು ಅಸುರಕ್ಷಿತವಾಗಿದ್ದು, ಕಟ್ಟಡ ಕುಸಿತಕ್ಕೆ ಇದೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾನೂನು ಪ್ರಕಾರ, ಕಟ್ಟಡ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ಸಿಬ್ಬಂದಿ ಆಗಮನ

ಇದಕ್ಕಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕಾರ್ಯನಿರ್ವಾಹಕ ಇಂಜಿನಿಯರ್ (ಕಟ್ಟಡಗಳು ಮತ್ತು ರಸ್ತೆಗಳು) ಇದರ ಸದಸ್ಯರಾಗಿರುತ್ತಾರೆ. ಅವರು ಘಟನೆ ಕುರಿತಾದ ವರದಿಯನ್ನು ಸಲ್ಲಿಸಲಿದ್ದಾರೆ.

ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

SCROLL FOR NEXT