ದೇಶ

ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿ ತಿರಸ್ಕಾರ; ಕಾನೂನಿನಡಿ ಲಭ್ಯವಿರುವ ಎಲ್ಲಾ ಆಯ್ಕೆ ಬಳಸಿಕೊಳ್ಳುತ್ತೇವೆ: ಕಾಂಗ್ರೆಸ್

Ramyashree GN

ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ನೀಡಲಾಗಿರುವ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಕೋರ್ಟ್ ತಿರಸ್ಕರಿಸಿದ ನಂತರ, ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಬಳಸಿಕೊಂಡು ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ಗುರುವಾರ ಹೇಳಿದೆ.

'ಕಾನೂನಿನ ಅಡಿಯಲ್ಲಿ ನಮಗೆ ಇನ್ನೂ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನಾವು ಬಳಸಿಕೊಳ್ಳುವುದನ್ನು ಮುಂದುವರಿಸುತ್ತೇವೆ. ಸಂಜೆ 4 ಗಂಟೆಗೆ ಡಾ ಎಎಂ ಸಿಂಘ್ವಿ ಅವರು ರಾಹುಲ್ ಗಾಂಧಿ ಮನವಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸೂರತ್‌ನ ಕೆಳ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆ ಕೋರಿ ರಾಹುಲ್‌ ಗಾಂಧಿ ಅವರು ಏಪ್ರಿಲ್‌ 3ರಂದು ಸೆಷನ್ಸ್‌ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್ ಪಿ ಮೊಗೇರ ತಿರಸ್ಕರಿಸಿದ್ದಾರೆ. 

ಶಿಕ್ಷೆಗೆ ತಡೆಯಾಜ್ಞೆ ಸಿಕ್ಕಿದ್ದಿದ್ದರೆ, ರಾಹುಲ್‌ ಗಾಂಧಿಯವರ ಸಂಸತ್‌ ಸದಸ್ಯತ್ವ ಮರುಸ್ಥಾಪನೆಯಾಗಲು ನೆರವಾಗುತ್ತಿತ್ತು. ಜೈಲು ಶಿಕ್ಷೆ ಪ್ರಕಟಗೊಂಡ ಮರು ದಿನವೇ ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. 

ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ 'ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮವನ್ನೇ ಏಕೆ ಹೊಂದಿದ್ದಾರೆ?' ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಸೂರತ್‌ ಕ್ಷೇತ್ರದ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸೂರತ್‌ ನ್ಯಾಯಾಲಯವು ರಾಹುಲ್‌ ಅವರನ್ನು ಅಪರಾಧಿ ಎಂದು ಘೋಷಿಸಿತ್ತು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್‌ 23ರಂದು ತೀರ್ಪು ನೀಡಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದ ನ್ಯಾಯಾಲಯ, ತೀರ್ಪನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿತ್ತು. 

SCROLL FOR NEXT