ದೇಶ

ಸುಡಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

Nagaraja AB

ನವದೆಹಲಿ: ಸುಡಾನ್ ನಲ್ಲಿರುವ ಭಾರತೀಯರ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಸುಡಾನ್‌ನ ಭಾರತದ ರಾಯಭಾರಿ ಸಭೆಯಲ್ಲಿ ಉಪಸ್ಥಿತರಿದ್ದರು. 

ಸುಡಾನ್ ಮಿಲಿಟರಿ ಮತ್ತು ಅರೆಸೇನಾ ಪಡೆ ನಡುವಿನ ಘರ್ಷಣೆಯಿಂದಾಗಿ ಉಂಟಾದ ಹಿಂಸಾಚಾರದಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ 200 ಜನರು ಸಾವನ್ನಪ್ಪಿದ್ದು, ಪ್ರಧಾನಿ ಮೋದಿ ಸುಡಾನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಿದರು. ಸೂಡಾನ್ ನಲ್ಲಿರುವ ಪರಿಸ್ಥಿತಿ ಕುರಿತು ವರದಿಯನ್ನು ಪಡೆದ ಪ್ರಧಾನಿ, ಪ್ರಸ್ತುತ ಅಲ್ಲಿ ಸಿಲುಕಿರುವ 3,000 ಭಾರತೀಯ ಪ್ರಜೆಗಳ ಸುರಕ್ಷತೆಗೆ ಕಡೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. 

ಕಳೆದ ವಾರ ದಾರಿ ತಪ್ಪಿದ ಬುಲೆಟ್‌ಗೆ  ಬಲಿಯಾದ ಭಾರತೀಯ ಪ್ರಜೆಯ ನಿಧನದ ಬಗ್ಗೆ ಪ್ರಧಾನ ಮಂತ್ರಿ ಸಂತಾಪ ವ್ಯಕ್ತಪಡಿಸಿದರು. ಜಾಗರೂಕತೆ ವಹಿಸಿ, ಬೆಳವಣಿಗೆಗಳನ್ನು ಹತ್ತಿರದಿಂದ ನಿರ್ವಹಿಸುವಂತೆ, ಭಾರತೀಯರ ಸುರಕ್ಷತೆಗೆ ಬಗ್ಗೆ ನಿರಂತರವಾಗಿ ಪರಿಶೀಲಿಸುವಂತೆ ಸಂಬಂಧಿತ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿವಿಧ ಆಯ್ಕೆಗಳ ಕಾರ್ಯಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಭಾರತೀಯರ ಸ್ಥಳಾಂತರ ಯೋಜನೆ ತಯಾರಿಸಲು ಮೋದಿ  ನಿರ್ದೇಶನ ನೀಡಿದರು. ಈ ಪ್ರದೇಶದಲ್ಲಿನ ನೆರಹೊರೆಯ ರಾಷ್ಟ್ರಗಳೊಂದಿಗೆ ಸಂವಹನ ನಿರ್ವಹಣೆಯ ಪ್ರಾಮುಖ್ಯತೆಯನ್ನು  ಮೋದಿ ಒತ್ತಿ ಹೇಳಿದರು. 

SCROLL FOR NEXT