ದೇಶ

ಪ್ರತೀಕಾರಕ್ಕಾಗಿ ಸತ್ಯಪಾಲ್ ಮಲೀಕ್ ಗೆ ಸಿಬಿಐ ಸಮನ್ಸ್: ಕಾಂಗ್ರೆಸ್ ಆರೋಪ 

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲೀಕ್ ಗೆ ಸಿಬಿಐ ಸಮನ್ಸ್ ಜಾರಿಗೊಳಿಸಿರುವುದರ ಬಗ್ಗೆ ವಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಸತ್ಯಪಾಲ್ ಮಲೀಕ್ ಹಾಗೂ ಸತ್ಯವನ್ನು ಹೇಳುವ ಇತರರಿಗೆ ಈ ಮೂಲಕ ಮೌನವಾಗಿರುವಂತೆ ಸಂದೇಶ ರವಾನೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈ ಬಗ್ಗೆ ಮಾತನಾಡಿದ್ದು, ಸತ್ಯಪಾಲ್ ಮಲೀಕ್ ಗೆ ಸಮನ್ಸ್ ನೀಡಿದ್ದು ಅಚ್ಚರಿಯೇನು ಅಲ್ಲ. ಆದರೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಅವರು ಸೂಕ್ತ ಮತ್ತು ಸಂಬಂಧಿತ ಪ್ರಶ್ನೆಗಳನ್ನೆತ್ತಿದ 10 ದಿನಗಳಲ್ಲೇ ಪ್ರತೀಕಾರವಾಗಿ ಸಿಬಿಐ ಸಮನ್ಸ್ ಬಂದಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ. 

10 ದಿನಗಳೇಕೆ ತೆಗೆದುಕೊಂಡರೆಂಬುದು ತಿಳಿಯುತ್ತಿಲ್ಲ. ಸಾಮಾನ್ಯವಾಗಿ ಟೀಕೆಗಳನ್ನು ಮೌನವಾಗಿಸುವ ವಿಷಯದಲ್ಲಿ ಪ್ರಧಾನಿ ಕ್ಷಿಪ್ರವಾಗಿರುತ್ತಾರೆ. ಸತ್ಯಪಾಲ್ ಮಲೀಕ್ ಮಾಡಿದ್ದಾದರೂ ಏನು? ಅವರು ಕೆಲವು ಪ್ರಮುಖ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ತವಾದ ಪ್ರಶ್ನೆಗಳನ್ನು ಕೇಳಿದ್ದರು  ಎಂದು ಮಲೀಕ್ ಅವರನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
 
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದಲ್ಲಿ ನಡೆದ ವಿಮೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಲೀಕ್ ಅವರನ್ನು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿದೆ.

SCROLL FOR NEXT