ದೇಶ

ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ; ಕೇರಳದಲ್ಲಿ ಕಟ್ಟೆಚ್ಚರ

Manjula VN

ತಿರುವನಂತಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇರಳ ಭೇಟಿ ಸಂದರ್ಭದಲ್ಲಿ ಆತ್ಮಾಹುತಿ ಬಾಂಬ್ ನಡೆಯುವ ಸಾಧ್ಯತೆ ಇದೆ ಎಂಬ ಬೆದರಿಕೆ ಸಂದೇಶವುಳ್ಳ ಪತ್ರವೊಂದು ದೊರೆತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮೋದಿ ಅವರು ಏಪ್ರಿಲ್ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಬಾಂಬ್ ದಾಳಿ ನಡೆಯಲಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
 
ಬಿಜೆಪಿಯ ರಾಜ್ಯ ಕಚೇರಿಗೆ ಈ ಪತ್ರ ಬಂದಿದ್ದು, ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್​ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಬೆದರಿಕೆ ಪತ್ರದಲ್ಲಿ ವ್ಯಕ್ತಿಯೊಬ್ಬರ ಹೆಸರು ಮತ್ತು ವಿವರಗಳಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಆದರೆ, ತನ್ನ ಹೆಸರಲ್ಲಿ ಬೇರೆ ಯಾರೋ ವ್ಯಕ್ತಿಗಳು ಕೃತ್ಯವೆಸಗಿದ್ದಾರೆಂದು ವಿಚಾರಣೆ ವೇಳೆ ವ್ಯಕ್ತಿ ಹೇಳಿದ್ದಾನೆಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಕೇಂದ್ರದ ತನಿಖಾ ಸಂಸ್ಥೆಗಳು ಕೇರಳ ರಾಜ್ಯ ಪೊಲೀಸರಿಂದ ಹೆಚ್ಚಿನ ಮಾಹಿತಿ ಕೋರಿವೆ.

ಮೋದಿ ರಾಜ್ಯ ಭೇಟಿ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಎಡಿಜಿಪಿ ಅವರು ಸಿದ್ಧಪಡಿಸಿರುವ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ.

ನಿಷೇಧಿತ ಪಿಎಫ್​ಐ ಸಂಘಟನೆ ಸೇರಿದಂತೆ ಇತರ ಸಂಘಟನೆಗಳ ಬೆದರಿಕೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದು ವರದಿಯಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ಎಂ ಮುರಳೀಧರನ್ ಅವರು,  ರಾಜ್ಯ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳೆಲ್ಲವೂ ನಿಗದಿಯಂತೆಯೇ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್​ ತಿಳಿಸಿದ್ದಾರೆ.

ಏಪ್ರಿಲ್ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಮೋದಿ, ‘ಯುವಂ’ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ನಂತರ ಕೊಚ್ಚಿಯಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಮರುದಿನ ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ.

SCROLL FOR NEXT