ದೇಶ

2002ರ ನರೋಡಾ ಗಾಮ್ ಗಲಭೆ ಪ್ರಕರಣ: ಖುಲಾಸೆ ಆದೇಶ ಪ್ರಶ್ನಿಸಲಿರುವ ಸುಪ್ರೀಂ ನೇಮಿತ ಎಸ್ ಐಟಿ!

Nagaraja AB

ಅಹಮದಾಬಾದ್: 2002ರ ನರೋಡಾ ಗಾಮ್ ಗಲಭೆ ಪ್ರಕರಣದಲ್ಲಿ 67 ಮಂದಿ ಆರೋಪಿಗಳನ್ನು ವಿಶೇಷ ನ್ಯಾಯಾಲಯ ಇತ್ತೀಚೆಗೆ ಖುಲಾಸೆಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.

ಗೋಧಾ ಹತ್ಯಾಕಾಂಡ ಬಳಿಕ ಅಹಮದಾಬಾದ್ ನ ನರೋಡಾ ಗಾಮ್ ನಲ್ಲಿ ಗಲಭೆಯಲ್ಲಿ 11 ಮುಸ್ಲಿಂರನ್ನು ಹತ್ಯೆ ಮಾಡಲಾಗಿತ್ತು. ಇದಾದ ಸುಮಾರು ಎರಡು ದಶಕಗಳ ನಂತರ ಏಪ್ರಿಲ್ 20 ರಂದು  ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಮಾಜಿ ಬಜರಂಗದಳದ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲಾ 67 ಆರೋಪಿಗಳನ್ನು ವಿಶೇಷ ತನಿಖಾ ತಂಡದ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಎಸ್‌ಕೆ ಬಾಕ್ಸಿ ಯಾಲಯವು ಖುಲಾಸೆಗೊಳಿಸಿತ್ತು.

ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಎಸ್‌ಐಟಿ ಖಂಡಿತವಾಗಿಯೂ ಗುಜರಾತ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ. ಎಸ್‌ಐಟಿ ನ್ಯಾಯಾಲಯದ ತೀರ್ಪಿನ ಪ್ರತಿಗಾಗಿ ಕಾಯಲಾಗುತ್ತಿದ್ದು, ತೀರ್ಪನ್ನು ಅಧ್ಯಯನ ಮಾಡಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.

ನರೋಡಾ ಗಾಮ್‌ನಲ್ಲಿ ನಡೆದ ಹತ್ಯಾಕಾಂಡವು 2002ರ ಒಂಬತ್ತು ಪ್ರಮುಖ ಕೋಮುಗಲಭೆ ಪ್ರಕರಣಗಳಲ್ಲಿ ಒಂದಾಗಿದ್ದು, ಸುಪ್ರೀಂ ನೇಮಿತ ಎಸ್‌ಐಟಿ ತನಿಖೆ ನಡೆಸುತಿತ್ತು ಮತ್ತು ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸಿದ್ದವು. ಎಸ್‌ಐಟಿ 2008 ರಲ್ಲಿ ಗುಜರಾತ್ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿತು ಮತ್ತು 30 ಕ್ಕೂ ಹೆಚ್ಚು ಜನರನ್ನು ಬಂಧಿಸಿತು. ಕೊಡ್ನಾನಿ (67) ಮತ್ತು ಬಜರಂಗಿ ಅವರನ್ನು ಹೊರತುಪಡಿಸಿ, ಮಾಜಿ ವಿಎಚ್‌ಪಿ ನಾಯಕ ಜಯದೀಪ್ ಪಟೇಲ್ ಅವರನ್ನು ವಿಶೇಷ ನ್ಯಾಯಾಲಯವು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದು, ಅದರಲ್ಲಿ 18 ಮಂದಿ ವಿಚಾರಣೆಯ ಬಾಕಿಯಿರುವಾಗಲೇ ಸಾವನ್ನಪ್ಪಿದ್ದರೆ, ಒಬ್ಬರನ್ನು ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಸೆಕ್ಷನ್ 169 ರ ಅಡಿಯಲ್ಲಿ ನ್ಯಾಯಾಲಯವು ಈ ಹಿಂದೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಬಿಡುಗಡೆ ಮಾಡಿತ್ತು. ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಸಂತ್ರಸ್ತರ ಕುಟುಂಬದ ವಕೀಲರು ಈಗಾಗಲೇ ಹೇಳಿದ್ದಾರೆ. 

ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್​ಗೆ ಬೆಂಕಿ ಹಚ್ಚಿದ್ದರಿಂದ 58 ಜನರು, ಬಹುತೇಕವಾಗಿ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರು ಸಾವನ್ನಪ್ಪಿದ್ದರು. ಮಾರನೇ ದಿನ ಅಹಮದಾಬಾದ್ ನಗರದ ನರೋಡಾ ಗಾಮ್ ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 11 ಮಂದಿಯನ್ನು ಕೊಂದು ಹಾಕಲಾಗಿತ್ತು. 

SCROLL FOR NEXT