ದೇಶ

ಅತೀಕ್, ಅಶ್ರಫ್ ಹತ್ಯೆ ಕೇಸಿನ ಬಗ್ಗೆ ಸ್ವತಂತ್ರ ತನಿಖೆ ಕೋರಿ ಅರ್ಜಿ: ಏಪ್ರಿಲ್ 28ರಂದು ಸುಪ್ರೀಂ ಕೋರ್ಟ್ ವಿಚಾರಣೆ

Sumana Upadhyaya

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಮನವಿಗೆ ಏಪ್ರಿಲ್ 28 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. 

60 ವರ್ಷದ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ತಪಾಸಣೆಗಾಗಿ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಪೊಲೀಸ್ ಸಿಬ್ಬಂದಿ ಬೆಂಗಾವಲಿನಲ್ಲಿ ಕರೆದೊಯ್ಯುತ್ತಿದ್ದಾಗ ಮೊನ್ನೆ ಏಪ್ರಿಲ್ 15 ರಂದು ರಾತ್ರಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಪತ್ರಕರ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದರು. 

ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಮನವಿಯಲ್ಲಿ 2017 ರಿಂದ ಉತ್ತರ ಪ್ರದೇಶದಲ್ಲಿ ನಡೆದ 183 ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠದ ಮುಂದೆ ಇಂದು ತಿವಾರಿ ಅವರು ತುರ್ತು ವಿಚಾರಣೆಗೆ ವಿಷಯವನ್ನು ಪ್ರಸ್ತಾಪಿಸಿದರು. 

"ಐವರು ನ್ಯಾಯಾಧೀಶರು ಅನಾರೋಗ್ಯ ಮತ್ತು ಇತರ ಕಾರಣಗಳಿಂದ ಲಭ್ಯವಿಲ್ಲದ ಕಾರಣ, ದಿನಾಂಕಗಳನ್ನು ನೀಡಲಾದ ಕೆಲವು ಪ್ರಕರಣಗಳನ್ನು ಪಟ್ಟಿ ಮಾಡಲಾಗಿಲ್ಲ. ನಾವು ಇದನ್ನು ಶುಕ್ರವಾರ ವಿಚಾರಣೆ ನಡೆಸುತ್ತೇವೆ" ಎಂದು ಸಿಜೆಐ ಹೇಳಿದರು.

SCROLL FOR NEXT