ದೇಶ

'ರಾಕೆಟ್' ಪಟಾಕಿಯನ್ನು ಬಾಯಿಯಲ್ಲಿಟ್ಟುಕೊಂಡು ಸಿಡಿಸಲು ಯತ್ನ, ಸೇನಾಧಿಕಾರಿ ಸಾವು

Ramyashree GN

ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮದುವೆಯೊಂದರ ವೇಳೆ ಪಟಾಕಿಯನ್ನು ಬಾಯಿಯಲ್ಲಿಟ್ಟುಕೊಂಡು ಸಿಡಿಸಲು ಯತ್ನಿಸಿದ 35 ವರ್ಷದ ಸೇನಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಜಿಲ್ಲೆಯ ಅಮ್ಜೆರಾ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ದಾರ್‌ಪುರ ತಹಸಿಲ್‌ನ ಜಲೋಖ್ಯ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಯೋಧನನ್ನು ನಿರ್ಭಯ್ ಸಿಂಗ್ (35) ಎಂದು ಗುರುತಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಯೋಧ ತನ್ನ ಸೊಸೆಯ ಮದುವೆಯಲ್ಲಿ ಪಾಲ್ಗೊಳ್ಳಲು ಒಂದು ತಿಂಗಳ ರಜೆಯ ಮೇಲೆ ಇಲ್ಲಿಗೆ ಬಂದಿದ್ದರು. ಸಂಭ್ರಮಾಚರಣೆ ವೇಳೆ ಸಿಂಗ್ ಬಾಯಲ್ಲಿ ‘ರಾಕೆಟ್’ ಪಟಾಕಿ ಇಟ್ಟು ಸಿಡಿಸಲು ಯತ್ನಿಸಿದ್ದಾರೆ. ಆದರೆ, ಪಟಾಕಿ ಮೇಲೆ ಹಾರುವ ಬದಲು ಬಾಯಿಯೊಳಗೆ ಸ್ಫೋಟಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಮ್ಜೆರಾ ಪೊಲೀಸ್ ಠಾಣೆಯ ಉಸ್ತುವಾರಿ ಸಿಬಿ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಕುಟುಂಬ ಸದಸ್ಯರು ಘಟನೆ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಎಂಎಚ್ಒಡಬ್ಲ್ಯು ತಂಡವು ಮಂಗಳವಾರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದೆ.

ಅಧಿಕಾರಿಗಳು ಯೋಧನ ಪಾರ್ಥೀವ ಶರೀರವನ್ನು ಗ್ರಾಮದಿಂದ ಸೇನೆಯ ಅಧಿಕೃತ ವಾಹನದಲ್ಲಿ ಮುಕ್ತಿಧಾಮಕ್ಕೆ ಕೊಂಡೊಯ್ದು ಶಿಷ್ಟಾಚಾರದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

SCROLL FOR NEXT