ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಮೇ 12 ರವರೆಗೆ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

Ramyashree GN

ನವದೆಹಲಿ: ಸಿಬಿಐ ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಗುರುವಾರ ಮೇ 12 ರವರೆಗೆ ವಿಸ್ತರಿಸಿದೆ.

ಹಲವಾರು ಸುತ್ತಿನ ವಿಚಾರಣೆಯ ನಂತರ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪದ ಮೇಲೆ ಫೆಬ್ರುವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.

ಗಮನಿಸಬೇಕಾದ ಸಂಗತಿಯೆಂದರೆ, ಇತ್ತೀಚೆಗೆ ರದ್ದಾದ ದೆಹಲಿ ಅಬಕಾರಿ ನೀತಿ 2021-22 ಅನ್ನು ರಾಷ್ಟ್ರ ರಾಜಧಾನಿಯಲ್ಲಿನ ಮದ್ಯದ ವ್ಯಾಪಾರದಲ್ಲಿ ಕಾರ್ಟಲೈಸೇಶನ್ (ಉತ್ಪಾದಕರು, ಮಾರಾಟಗಾರರು, ವಿತರಕರು, ವ್ಯಾಪಾರಿಗಳು ಅಥವಾ ಸೇವಾ ಪೂರೈಕೆದಾರರ ಗುಂಪು) ಮತ್ತು ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ಕುಶಲತೆಯಿಂದ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಉದ್ಯಮಿ ವಿಜಯ್ ನಾಯರ್ ಪ್ರಮುಖ ಸಂಚುಕೋರರು ಎಂದು ಸಿಬಿಐ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣದಲ್ಲಿನ ಇತರ ಆರೋಪಿಗಳಿಗೆ ನೀಡಿದಂತೆಯೇ ತನಗೂ ಪರಿಹಾರ ನೀಡಬೇಕು ಮತ್ತು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಸಾಕ್ಷ್ಯವನ್ನು ಹಾಳು ಮಾಡುವ ಸ್ಥಿತಿಯಲ್ಲಿಲ್ಲ ಎಂದು ಒತ್ತಾಯಿಸಿದ್ದ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಸಿಬಿಐ ಈ ವಾದವನ್ನು ಮಂಡಿಸಿತು. 

SCROLL FOR NEXT