ದೇಶ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಎಸ್‌ಸಿ ಸೆಲ್ ಅಧ್ಯಕ್ಷರ ಮೃತದೇಹ ಪತ್ತೆ; ಕುಟುಂಬಸ್ಥರಿಂದ ಕೊಲೆ ಆರೋಪ

Ramyashree GN

ಮೇದಿನಿನಗರ: ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಗುರುವಾರ ಬಿಜೆಪಿ ಮುಖಂಡನ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿಯ ಪರಿಶಿಷ್ಟ ಜಾತಿ ಕೋಶದ ಮನಾಟು ಮಂಡಲದ ಅಧ್ಯಕ್ಷ ಪ್ರಮೋದ್ ಸಿಂಗ್ (35) ಇಂದು ಬೆಳಗ್ಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಲೆಸ್ಲಿಗುನ್) ಅಲೋಕ್ ಕುಮಾರ್ ತುಟಿ ತಿಳಿಸಿದ್ದಾರೆ.

ಸಿಂಗ್ ಬುಧವಾರ ಸಂಜೆ 5 ಗಂಟೆಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಅವರ ದೇಹವು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜಮೀನು ವಿವಾದದ ಹಿನ್ನೆಲೆಯಲ್ಲಿ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಮತ್ತು ಆತ್ಮಹತ್ಯೆ ಎಂದು ಬಿಂಬಿಸಲು ಮರಕ್ಕೆ  ನೇಣು ಬಿಗಿಯಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳೊಂದಿಗೆ ಕುಟುಂಬಸ್ಥರು ರಸ್ತೆತಡೆ ನಡೆಸಿದರು.

ಸಿಂಗ್ ಮನೆಗೆ ಹಿಂತಿರುಗಿಲ್ಲ ಎಂದು ಕಳೆದ ರಾತ್ರಿ ದೂರು ಕೊಡಲು ಹೋದಾಗ ಮನಾಟು ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಕಮಲೇಶ್ ಕುಮಾರ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದ್ದರೆ, ಸಿಂಗ್‌ ಉಳಿಯುತ್ತಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮಟಿಲಾ ನಿವಾಸಿಯಾಗಿರುವ ಸಿಂಗ್, ಒಬ್ಬ ವ್ಯಕ್ತಿಯಿಂದ ಹಣ ವಸೂಲಿ ಮಾಡಲು ಹೊರಟು, 20 ನಿಮಿಷಗಳಲ್ಲಿ ಮನೆಗೆ ಹಿಂತಿರುಗುವುದಾಗಿ ತನ್ನ ಸಹೋದರಿಗೆ ತಿಳಿಸಿದ್ದರು. ಆದರೆ, ಹಿಂತಿರುಗಲಿಲ್ಲ.

ಎಸ್‌ಡಿಪಿಒ ಮಾತನಾಡಿ, 'ನಾವು ಪ್ರಕರಣವನ್ನು ಎಲ್ಲಾ ಸಂಭಾವ್ಯ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಮೃತದೇಹವನ್ನು ಮೇದಿನಿನಗರದ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೊ ಎಂದು ಹೇಳಬಹುದು' ಎಂದು ಹೇಳಿದರು.

SCROLL FOR NEXT