ದೇಶ

ಪೂಂಚ್ ಉಗ್ರರ ದಾಳಿ ಪ್ರಕರಣ: ಪೊಲೀಸರ ವಿಚಾರಣೆ ಬಳಿಕ ವಿಷ ಸೇವಿಸಿದ್ದ ವ್ಯಕ್ತಿ ಸಾವು

Manjula VN

ಪೂಂಚ್: ಪೂಂಚ್ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ ಬಳಿಕ ವಿಷ ಸೇವಿಸಿದ್ದ ವ್ಯಕ್ತಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಜಿಲ್ಲೆಯ ಮೆಂಧರ್ ತಹಸಿಲ್‌ನ ನಾರ್ ಗ್ರಾಮದ ನಿವಾಸಿ ಮುಖ್ತಾರ್ ಹುಸೇನ್ ಷಾ (35) ಮೃತ ವ್ಯಕ್ತಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಶಂಕಿತ ಉಗ್ರ ಎಂದು ಕರೆದಿರಲಿಲ್ಲ. ಕೌಟುಂಬಿಕ ಸಮಸ್ಯೆಗಳಿಂದಾಗಿ ವಿಷ ಸೇವಿಸಿದ್ದ ಎಂದು ತಿಳಿಸಿದ್ದಾರೆ.

ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಖ್ತಾರ್ ಹುಸೇನ್ ಷಾ ಅವರನ್ನು ವಿಚಾರಣೆಗೊಳಪಡಿಸಿದ್ದರು. ಇದಾದ ಬಳಿಕ ಮಂಗಳವಾರ ಸಂಜೆ ಹುಸೇನ್ ಅವರು ಮನೆಯಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು, ಎರಡು ದಿನಗಳ ಚಿಕಿತ್ಸೆ ಬಳಿಕ ಗುರುವಾರ ಬೆಳಿಗ್ಗೆ ಹುಸೇನ್ ನಿಧನ ಹೊಂದಿದ್ದರು ಹೇಳಿದ್ದಾರೆ.

ಏಪ್ರಿಲ್ 20 ರಂದು ಭಟ ಧುರಿಯನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಘಟನೆ ಬಳಿಕ ಸ್ಥಳೀಯ ನಿವಾಸಿಗಳನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಹುಸೇನ್ ಅವರನ್ನು ಶಂಕಿತ ಎಂದು ಹೇಳಲಾಗಿರಲಿಲ್ಲ. ಎಲ್ಲರನ್ನೂ ವಿಚಾರಣೆಗೆ ಕರೆದಂತೆ ಅವರನ್ನೂ ವಿಚಾರಣೆಗೆ ಕರೆಯಲಾಗಿತ್ತು. ವ್ಯಕ್ತಿ ಕೌಟಿಂಬುಕ ಸಮಸ್ಯೆ ಎದುರಿಸುತ್ತಿದ್ದರು ಎಂಬುದು ತಿಳಿದುಬಂದಿದ್ದು, ಹೀಗಾಗಿಯೇ ವಿಷ ಸೇವನೆ ಮಾಡಿದ್ದಾರೆಂದು ಹೇಳಿದ್ದಾರೆ.

ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 60 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಘಟಾ ಸ್ಥಳದಲ್ಲಿ ಕಾರ್ಯಾಚರಣೆಗಳು ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಡ್ರೋಣ್, ಸ್ನಿಫರ್ ಡಾಗ್ ಗಳು, ಮಟಲ್ ಡಿಟೆಕ್ಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ದಾಳಿಯಲ್ಲಿ 7-8 ಉಗ್ರರು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ. ಸೇನಾ ವಾಹನದ ಮೇಲೆ ದಾಳಿ ನಡೆಸಿದ ಬಳಿಕ ಉಗ್ರರು ರಸ್ತೆಯಲ್ಲಿ ಹಣ್ಣು ಮತ್ತು ತರಕಾರಿ ಸಾಗಿಸುತ್ತಿದ್ದ ಟ್ರಕ್ ಮೇಲೆ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವಾಹನದ ಮೇಲೆ 50ಕ್ಕೂ ಹೆಚ್ಚು ಗುಂಡಿನ ದಾಳಿ ನಡೆದಿರುವ ಗುರುತುಗಳು ಪತ್ತೆಯಾಗಿವೆ. ಉಗ್ರರ ದಾಳಿ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಇದು ತೋರಿಸುತ್ತಿದೆ.

ಆಳವಾದ ಕಮರಿನಲ್ಲಿ, ಅರಣ್ಯ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು ಅಡಗಿಸಿಟ್ಟಿರಬಹುದು ಎಂಬ ಶಂಕೆಗಳಿದ್ದು, ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದ್ದಾರೆ.

SCROLL FOR NEXT