ದೇಶ

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ; 20 ವರ್ಷದ ಯುವಕನ ಬಂಧನ

Ramyashree GN

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಆರೋಪದ ಮೇಲೆ ಉತ್ತರ ಪ್ರದೇಶದ 20 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಸೋಮವಾರ ಪಿಸಿಆರ್ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದಿದ್ದರು. ಇದಾದ ನಾಲ್ಕು ದಿನಗಳ ನಂತರ ಆರೋಪಿಯ ಬಂಧನವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹುಡುಕಾಟ ನಡೆಸಲಾಯಿತು ಆದರೆ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ  ಎಂದು ಘೋಷಿಸಲಾಯಿತು ಎಂದು ಅಧಿಕಾರಿ ಹೇಳಿದರು.

ಪೊಲೀಸರು ಮತ್ತೆ ಅದೇ ನಂಬರ್‌ಗೆ ಕರೆ ಮಾಡಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದಿಂದ ಕರೆ ಮಾಡಲಾಗಿದ್ದು, ಹಾಪುರ್ ನಿವಾಸಿ ಝಾಕಿರ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ಸಂಖ್ಯೆಯನ್ನು ನೋಂದಾಯಿಸಲಾಗಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT