ದೇಶ

ಲುಧಿಯಾನದಲ್ಲಿ ಅನಿಲ ಸೋರಿಕೆ: 11 ಮಂದಿ ಸಾವು, ಹಲವರು ಆಸ್ಪತ್ರೆಗೆ ದಾಖಲು

Manjula VN

ಲುಧಿಯಾನ: ಪಂಜಾಬ್ ರಾಜ್ಯದ ಲುಧಿಯಾನಾದ ಗಿಯಾಸ್‌ಪುರ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದ್ದು, ಪರಿಣಾಮ ಕನಿಷ್ಟ 11 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳವನ್ನು ಸೀಲ್ ಮಾಡಿದ್ದಾರೆ. ಅಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುವಾ ರಸ್ತೆಯಲ್ಲಿ ಕಾರ್ಖಾನೆಯಿದ್ದು, ಇಂದು ಬಳಿಗ್ಗೆ 7.30ರ ಸುಮಾರಿಗೆ ಅನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಸ್ಥಳವನ್ನು ಸೀಲ್ ಮಾಡಿರುವ ಪೊಲೀಸರು, ಸ್ಥಳ ಪ್ರವೇಶಿಸದಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

"ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಕಾರ್ಖಾನೆಯ ಅನಿಲ ಸೋರಿಕೆ ಘಟನೆಯು ಬಹಳ ನೋವುಂಟು ಮಾಡಿದೆ. ಪೊಲೀಸ್, ಸರ್ಕಾರ ಮತ್ತು ಎನ್'ಡಿಆರ್'ಎಫ್ ಪಡೆಗಳು ಸ್ಥಳದಲ್ಲಿದ್ದು, ಅಗತ್ಯ ನೆರವುಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಕೆಲವರು ರಸ್ತೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿವೆ. ಘಟನೆ ಕಂಡ ಸ್ಥಳೀಯರು ಭೀತಿಗೊಳಗಾಗಿದ್ದು, ಮನೆಗಳನ್ನು ತೊರೆಯುತ್ತಿದ್ದಾರೆಂದು ವರದಿಗಳು ತಿಳಿಸಿವೆ.

SCROLL FOR NEXT