ದೇಶ

ಗಾಯಕ ಸಿದ್ದು ಮೂಸೆವಾಲಾ ಕೊಲೆ ಆರೋಪಿ ಬಿಷ್ಣೋಯ್ ಭಾರತಕ್ಕೆ ಗಡಿಪಾರು, ಹಸ್ತಾಂತರ

Srinivasamurthy VN

ನವದೆಹಲಿ: ಪಂಜಾಬ್‍ನ ಖ್ಯಾತ ಗಾಯಕ ಸಿದ್ದು ಮೂಸೆವಾಲ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಚಿನ್ ಬಿಷ್ಣೋಯ್ ಅವರನ್ನು ಅಜರ್‍ಬೈಜಾನ್‍ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. 

ದೆಹಲಿಯ ವಿಶೇಷ ಪೊಲೀಸ್ ಆಯುಕ್ತ (ಸಿಪಿ) ಹರಗೋಬಿಂದರ್ ಸಿಂಗ್ ಧಲಿವಾಲ್ ಅವರು ಮಾಹಿತಿ ನೀಡಿದ್ದು, ಅಜರ್‍ಬೈಜಾನ್‍ನಲ್ಲಿ ಕೆಲವು ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಸಚಿನ್ ಬಿಷ್ಣೋವ್ ಅವರನ್ನು ದೆಹಲಿ ಪೊಲೀಸರ ವಶಕ್ಕೆ ಹಸ್ತಾಂತರ ಮಾಡಲಾಗಿದೆ. ಕಳೆದ ವಾರ ಟ್ರಾನ್ಸ್ ಕಾಕೇಶಿಯನ್ ರಾಷ್ಟ್ರಕ್ಕೆ ತೆರಳಿದ್ದ ದೆಹಲಿ ವಿಶೇಷ ಘಟಕದ ಒಂದು ತಂಡ ಅಜರ್‍ಬೈಜಾನ್‍ನಲ್ಲಿ ಸ್ಥಳೀಯ ಅಕಾರಿಗಳ ನೆರವು ಪಡೆದು ಆರೋಪಿ ಸಚಿನ್ ಬಿಷ್ಣೋಯ್ ಅವರನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ ಅವರ ಸೋದರಳಿಯ ಸಚಿನ್ ಬಿಷ್ಣೋಯ್ ಕಳೆದ ವರ್ಷ ಮೇನಲ್ಲಿ ನಡೆದ ಕೊಲೆಯ ನಂತರ ನಕಲಿ ಪಾಸ್ಪೋರ್ಟ್ ಬಳಸಿ ದೇಶದಿಂದ ಪರಾರಿಯಾಗಿದ್ದನು. ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ರಾತ್ರಿ ಅಜರ್‍ಬೈಜಾನ್ ತಲುಪಿತ್ತು. ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಮತ್ತು ಕೌಂಟರ್ ಇಂಟೆಲಿಜೆನ್ಸ್ ಘಟಕದ ಇಬ್ಬರು ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಸುಮಾರು ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಸಚಿನ್ ಬಿಷ್ಣೋಯ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಜವಾಬ್ದಾರಿಯನ್ನು ವಹಿಸಿತ್ತು.

ಸಚಿನ್ ಬಿಷ್ಣೋಯ್ ಸಿದ್ದು ಮೂಸೆ ವಾಲಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಘಟನೆ ನಡೆದಾಗಿನಿಂದ ತೀವ್ರ ತನಿಖೆಗೆ ಒಳಪಟ್ಟಿದೆ. ಆತನ ಸೆರೆಹಿಡಿಯುವಿಕೆ ಮತ್ತು ಹಸ್ತಾಂತರವು ಕೊಲೆ ಪ್ರಕರಣದಲ್ಲಿ ಹಲವಾರು ನಿರ್ಣಾಯಕ ಬಹಿರಂಗಪಡಿಸುವಿಕೆಗಳಿಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
 

SCROLL FOR NEXT