ಜೈಪುರ: ರಾಜಸ್ಥಾನ ಸಚಿವ ಸಂಪುಟದಿಂದ ವಜಾಗೊಂಡ ಕಾಂಗ್ರೆಸ್ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಬುಧವಾರ ಕೆಂಪು ಡೈರಿಯ ಮೂರು ಪುಟಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಿಎಂ ಪುತ್ರ ಮತ್ತು ಆರ್‌ಸಿಎ ವಹಿವಾಟುಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸರ್ಕಾರ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಇತರ ಸಚಿವರ ವಿರುದ್ಧ ಗುಧಾ ಕೆಲ ದಿನಗಳಿಂದ ವಾಗ್ದಾಳಿ ನಡೆಸುತ್ತಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಡೈರಿ ಬಿಡುಗಡೆ ಮಾಡಿದ ಅವರು, ಅದರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಯ ಆಪ್ತ ಧರ್ಮೇಂದ್ರ ರಾಥೋಡ್ ಅವರ ಕೈಬರಹವಿದೆ ಎಂದು ಹೇಳಿದ್ದಾರೆ.
ಡೈರಿಯಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ(ಆರ್‌ಸಿಎ) ವ್ಯವಹಾರಗಳು ಕೋಡ್ ವರ್ಡ್‌ಗಳಲ್ಲಿವೆ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ಮತ್ತು ಸಿಎಂ ಪುತ್ರ ವೈಭವ್ ಗೆಹ್ಲೋಟ್ ಅವರ ಬಗ್ಗೆಯೂ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ರಾಜಸ್ಥಾನ: ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ; ಗೆಹ್ಲೋಟ್ ಶಾಸಕರಿಂದ ಹಲ್ಲೆ- ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಧಾ ಆರೋಪ
"ವೈಭವ್ ಜಿ ಮತ್ತು ನಾನು ಇಬ್ಬರೂ ಆರ್‌ಸಿಎ ಚುನಾವಣಾ ವೆಚ್ಚದ ಬಗ್ಗೆ ಚರ್ಚಿಸಿದ್ದೇವೆ. ನಿರ್ಧರಿಸಿದ ನಂತರವೂ ಭವಾನಿ ಸಮೋಟಾ ಜನರ ಹಣವನ್ನು ಯಾಕೆ ನೀಡುತ್ತಿಲ್ಲ... .ಭವಾನಿ ಸಮೋಟಾ ಅವರು ಹೆಚ್ಚಿನ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ... ಇದು ಸರಿಯಲ್ಲ ಎಂದು ನಾನು ಹೇಳಿದೆ. … ನೀವು ಅದನ್ನು ಈಡೇರಿಸಿದರೆ ನಾನು ಅದನ್ನು ಸಿಪಿ ಸರ್ ಅವರ ಗಮನಕ್ಕೆ ತರುತ್ತೇನೆ ಎಂದು ಭವಾನಿ ಸಮೋಟಾ ಹೇಳಿದರು... ನಂತರ ನಾನು ಜನವರಿ 31 ರೊಳಗೆ ನಿಮಗೆ ಹೇಳುತ್ತೇನೆ... ಇದು ಬಿಡುಗಡೆಯಾದ ಡೈರಿಯಲ್ಲಿನ ಪ್ರಮುಖ ಅಂಶಗಳು.
ಭವಾನಿ ಸಮೋಟಾ ಅವರು ಪ್ರಸ್ತುತ ಆರ್ ಸಿಎ ಕಾರ್ಯದರ್ಶಿಯಾಗಿದ್ದಾರೆ. ಅವರು ಸ್ಪೀಕರ್, ಡಾ. ಸಿ.ಪಿ. ಜೋಶಿ ಅವರಿಗೆ ನಿಕಟರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರು ಪ್ರಸ್ತುತ ಆರ್ ಸಿಎ ಅಧ್ಯಕ್ಷರಾಗಿದ್ದಾರೆ.