ದೇಶ

ಆರೋಪಿಗಳ ಬಂಧಿಸಲು ತೆರಳಿದ್ದ ಬೆಂಗಳೂರಿನ ನಾಲ್ವರು ಪೊಲೀಸರ ವಿರುದ್ಧ ಲಂಚ ಪಡೆದ ಆರೋಪ; ಕೇರಳ ಪೊಲೀಸರ ವಶಕ್ಕೆ!

Srinivasamurthy VN

ಕೊಚ್ಚಿ: ವಂಚನೆ ಪ್ರಕರಣದ ಆರೋಪಿಗಳ ಬಂಧಿಸಲು ಕೇರಳಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರೇ ಲಂಚ ಪಡೆದ ಆರೋಪದ ಮೇರೆಗೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ವಂಚನೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆದ ಆರೋಪದಲ್ಲಿ ‍ಇನ್‌ಸ್ಪೆಕ್ಟರ್‌ ಸೇರಿ 4 ಮಂದಿ ಕರ್ನಾಟಕದ ಪೊಲೀಸ್‌ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ಬಳಿಕ ವಶಕ್ಕೆ ಪಡೆದವರ ಮಾಹಿತಿ ನೀಡುವುದಾಗಿ ಪೊಲೀಸರು ಹೇಳಿದ್ದು, ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಈ ಪೊಲೀಸರು ತೆರಳಿದ್ದರು ಎಂದು ಹೇಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿರುವಂತೆ, 'ಕರ್ನಾಟಕದಲ್ಲಿ ನಡೆದ ವಂಚನೆ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಲು ಕರ್ನಾಟಕ ಪೊಲೀಸರು ಆಗಸ್ಟ್ 1ರಂದು ಕೊಚ್ಚಿಗೆ ತೆರಳಿದ್ದರು. ಅಲ್ಲಿ ಅವರು ಇಬ್ಬರು ಆರೋಪಿಗಳಿಂದ 3.95 ಲಕ್ಷ ರೂ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಕೊಚ್ಚಿಯ ಕಮಲಶ್ಶೇರಿ ಪೊಲೀಸರು ಕರ್ನಾಟಕದ 4 ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೊಚ್ಚಿ ಪೊಲೀಸ್‌ ಉಪ ಆಯುಕ್ತ ಬೇಬಿ ಪಿವಿ, ‘ಪ್ರಕರಣ ಸಂಬಂಧ ನಾವು ಕರ್ನಾಟಕ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಗುರುತು ಹಾಗೂ ಕೊಚ್ಚಿಗೆ ಬಂದಿರುವ ಉದ್ದೇಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ದಾಖಲಾಗಿದೆ‘ ಎಂದು ಹೇಳಿದ್ದಾರೆ.

SCROLL FOR NEXT