ದೇಶ

ಕಾಶ್ಮೀರದಲ್ಲಿ ಕಾಣೆಯಾಗಿದ್ದ ಸೈನಿಕ ಪತ್ತೆ, ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ: ಪೊಲೀಸರು

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ಶನಿವಾರ ಸಂಜೆ ನಾಪತ್ತೆಯಾಗಿದ್ದ ಸೇನಾ ಜವಾನ ಗುರುವಾರ ಪತ್ತೆಯಾಗಿದ್ದು, ವೈದ್ಯಕೀಯ ತಪಾಸಣೆ ನಂತರ ಜಂಟಿ ವಿಚಾರಣೆ ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಸೇನಾ ಯೋಧ ಜಾವೇದ್ ಅಹ್ಮದ್ ವಾನಿಯನ್ನು ಕುಲ್ಗಾಮ್ ಪೊಲೀಸರು ಇಂದು ಪತ್ತೆ ಮಾಡಿದ್ದಾರೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಅವರು ಟ್ವೀಟ್‌ ಮಾಡಿದ್ದಾರೆ.

ವೈದ್ಯಕೀಯ ತಪಾಸಣೆಯ ಬಳಿಕ ಯೋಧನ ಜಂಟಿ ವಿಚಾರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

25 ವರ್ಷದ ಜಾವೇದ್ ಅಹ್ಮದ್ ವಾನಿ ಅವರನ್ನು ಲೇಹ್ ಲಡಾಖ್‌ನಲ್ಲಿ ನಿಯೋಜಿಸಲಾಗಿತ್ತು. ಅವರು ಶನಿವಾರ ಸಂಜೆ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಅಸ್ತಲ್ ಗ್ರಾಮದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸಲು ಮನೆಯಿಂದ ಹೊರಟ ನಂತರ ನಾಪತ್ತೆಯಾಗಿದ್ದರು.

2014ರಲ್ಲಿ ಸೇನೆಗೆ ಸೇರಿದ್ದ ಜಾವೇದ್ ಅವರು ರಜೆಯ ಮೇಲಿದ್ದರು ಮತ್ತು ಭಾನುವಾರ ಮತ್ತೆ ಕೆಲಸಕ್ಕೆ ಹಾಜರಾಗಬೇಕಿತ್ತು.

ಆದರೆ ದಿಢೀರ್ ನಾಪತ್ತೆಯಾಗಿದ್ದು, ಉಗ್ರರು ಆತನನ್ನು ಅಪಹರಿಸಿರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು. ಜಾವೇದ್ ನನ್ನು ಬಿಡುಗಡೆ ಮಾಡುವಂತೆ ಆತನ ಕುಟುಂಬ ಸದಸ್ಯರು ಮನವಿ ಮಾಡಿದ್ದರು.

ಯೋಧ ನಾಪತ್ತೆಯಾದ ನಂತರ, ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನೆ ಭಾರಿ ಶೋಧ ಕಾರ್ಯಾಚರಣೆ ನಡೆಸಿತು. ಭದ್ರತಾ ಸಿಬ್ಬಂದಿ ಸುಮಾರು ಎರಡು ಡಜನ್ ಜನರನ್ನು ವಿಚಾರಣೆಗೆ ಒಳಪಡಿಸಿದ್ದರು ಮತ್ತು ಕಾಣೆಯಾದ ಸೈನಿಕನ ಕರೆ ದಾಖಲೆಗಳು ಮತ್ತು ಮೊಬೈಲ್ ಡೇಟಾವನ್ನು ಸಹ ಪರಿಶೀಲಿಸಿದ್ದರು.

SCROLL FOR NEXT