ದೇಶ

ರಾಷ್ಟ್ರಪತಿಯನ್ನು ಮುಖ್ಯಸ್ಥರನ್ನಾಗಿಸುವ ಐಐಎಂ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

Lingaraj Badiger

ನವದೆಹಲಿ: ದೇಶದ ಎಲ್ಲಾ ಐಐಎಂಗಳಿಗೆ ರಾಷ್ಟ್ರಪತಿಗಳನ್ನು ಸಂದರ್ಶಕ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸುವ ಐಐಎಂ ಮಸೂದೆ 2023 ಅನ್ನು ಲೋಕಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಗಿದೆ.

ಸಂಪೂರ್ಣ ಸ್ವಾಯತ್ತ ಸಂಸ್ಥೆಗಳಾದ ಐಐಎಂಗಳ ಕಾರ್ಯನಿರ್ವಹಣೆಯಲ್ಲಿ ಸಂದರ್ಶಕ ಮುಖ್ಯಸ್ಥರಿಗೆ ಹೆಚ್ಚಿನ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ರಾಷ್ಟ್ರಪತಿಗಳು ಎಲ್ಲಾ ಐಐಎಂಗಳ ಸಂದರ್ಶಕರಾಗಿರುತ್ತಾರೆ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ನಿರ್ದೇಶಕರನ್ನು ತೆಗೆದುಹಾಕುವ ಮತ್ತು ಆಯ್ಕೆ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿರುತ್ತಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ತಿದ್ದುಪಡಿ)ಮಸೂದೆ, 2023 ಅನ್ನು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಐಐಎಂಗಳಿಂದ ಶೈಕ್ಷಣಿಕ ಹೊಣೆಗಾರಿಕೆಯನ್ನು ಕಸಿದುಕೊಳ್ಳುವ ಯಾವುದೇ ಉದ್ದೇಶ ಸರ್ಕಾರ ಹೊಂದಿಲ್ಲ. ಆದರೆ ಕೇಂದ್ರ ಅವುಗಳ ನಿರ್ವಹಣಾ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುತ್ತದೆ ಎಂದರು.

ರಾಷ್ಟ್ರಪತಿಗಳು ಐಐಟಿಗಳು ಮತ್ತು ಎನ್‌ಐಟಿಗಳಿಗೆ ಸಂದರ್ಶಕರಾಗಿರುತ್ತಾರೆ. ಆದರೆ ಈ ಸಂಸ್ಥೆಗಳ ಶೈಕ್ಷಣಿಕ ಸ್ವಾಯತ್ತತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಪ್ರಧಾನ್ ಹೇಳಿದರು.

ಬಳಿಕ ಪ್ರತಿಪಕ್ಷಗಳ ವಿರೋಧದ ನಡುವೆಯೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ತಿದ್ದುಪಡಿ) ಮಸೂದೆ, 2023 ಅನ್ನು ಇಂದು ಧ್ವನಿ ಮತದ ಮೂಲಕ ಕೆಳಮನೆಯಲ್ಲಿ ಅಂಗೀಕರಿಸಲಾಯಿತು.

SCROLL FOR NEXT