ದೇಶ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ತಂದೆ-ಮಗ ಸೇರಿ ಮೂವರ ಹತ್ಯೆ, ಉಗ್ರರ ಅಟ್ಟಹಾಸ

Sumana Upadhyaya

ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹೊಸ ಹಿಂಸಾಚಾರ ಆರಂಭವಾಗಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ನಿನ್ನೆ ಶುಕ್ರವಾರ ತಡರಾತ್ರಿ ತಂದೆ-ಮಗ ಸೇರಿದಂತೆ ಮೂವರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕ್ವಾಕ್ಟಾದಲ್ಲಿ ನಿನ್ನೆ ರಾತ್ರಿ ಮೂವರು ಮಲಗಿದ್ದಾಗ ಗುಂಡೇಟಿನಿಂದ ಹೊಡೆದು ಕತ್ತಿಯಿಂದ ಕೊಚ್ಚಿ ಹತ್ಯೆಗೈದಿದ್ದಾರೆ ಎಂದು ಇಂದು ಬೆಳಗ್ಗೆ ಪೊಲೀಸರು ತಿಳಿಸಿದ್ದಾರೆ, ದುಷ್ಕರ್ಮಿಗಳು ಚುರಾಚಂದ್‌ಪುರದಿಂದ ಬಂದವರು ಎಂಬ ಮಾಹಿತಿ ಸಿಕ್ಕಿದೆ. 

ಕೊಲೆಯಾದ ಮೂವರು ಪರಿಹಾರ ಶಿಬಿರದಲ್ಲಿ ಇರುತ್ತಿದ್ದರು. ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತವಾಗಿದೆ ಎಂದು ತಿಳಿದ ನಂತರ ನಿನ್ನೆ ಕ್ವಾಕ್ಟಾದಲ್ಲಿನ ತಮ್ಮ ನಿವಾಸಗಳಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಘಟನೆಯ ನಂತರ ಕ್ವಾಕ್ಟಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಉದ್ರಿಕ್ತ ಗುಂಪೊಂದು ಚುರಾಚಂದ್‌ಪುರದ ಕಡೆಗೆ ಹೋಗಲು ಬಯಸಿತು ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಫೌಗಕ್ಚಾವೊ ಮತ್ತು ಕ್ವಾಕ್ಟಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜ್ಯ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಿದರು. 

ಆಗಸ್ಟ್ 4 ರಂದು, ಮಣಿಪುರ ಪೊಲೀಸರು ಜಂಟಿ ಭದ್ರತಾ ಪಡೆ ಕೌಟ್ರುಕ್ ಬೆಟ್ಟದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಿದರು. ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯು ಇಂದು ಕರೆದಿರುವ 24 ಗಂಟೆಗಳ ಸಾರ್ವತ್ರಿಕ ಮುಷ್ಕರವು ಇಂಫಾಲ್ ಕಣಿವೆಯಲ್ಲಿ ಸಾಮಾನ್ಯ ಜೀವನವನ್ನು ಸ್ಥಗಿತಗೊಳಿಸಿದೆ. ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಮಾರುಕಟ್ಟೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

SCROLL FOR NEXT